ಬೈಂದೂರು, ಅ 20 (Daijiworld News/MSP): ಮಹಾತ್ಮ ಗಾಂಧೀಜಿ ಪರಿಕಲ್ಪನೆಯ ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರಿನಲ್ಲಿ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಗಾಂಧೀಜಿ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ನಾಯಕರು ರಾಜಕೀಯ ದುರುದ್ದೇಶಕ್ಕಾಗಿ ಗಾಂಧೀಜಿ ಹೆಸರು ಬಳಸಿಕೊಂಡರೆ ಹೊರತು ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಗಾಂಧೀಜಿ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರಿಗೆ ಸರಿಯಾದ ಗೌರವ ನೀಡಲಿಲ್ಲ. ಆದರೆ ಮೋದಿ ನೇತೃತ್ವದ ಸರ್ಕಾರವು ಅಂಬೇಡ್ಕರ್ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ಅಭಿವೃಧ್ಧಿ ನಡೆಸುತ್ತಿದೆ. ಗಾಂಧೀಜಿ ಹಾಗೂ ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾಗಿ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದರು.ದೇಶದ ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸಲು ಸರ್ಕಾರಗಳು ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎನ್ನುವುದು ಗಾಂಧೀಜಿ ಕನಸಾಗಿತ್ತು. ಅದರಂತೆ ಪ್ರತಿ ಯೋಜನೆಗಳಲ್ಲಿಯೂ ಗಾಂಧೀಜಿ ಚಿಂತನೆ ಹಾಗೂ ಆಲೋಚನೆಗಳನ್ನು ಕಾಣಬಹುದಾಗಿದೆ. ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಗ್ರಾಮೀಣ ಭಾರತದ ಸಬಲೀಕರಣದಿಂದ ದೇಶದ ಪ್ರಗತಿ ಸಾಧ್ಯ ಎಂದಿದ್ದರು. ಸ್ವಾವಲಂಬಿ ಹಾಗೂ ಸ್ವಚ್ಛ ಭಾರತ ನಿರ್ಮಾಣ ಮಾಡಬೇಕು ಎನ್ನುವುದು ಗಾಂಧೀಜಿ ಚಿಂತನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗ್ರಾಮೀಣ ಭಾರತಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬೈಂದೂರು ಕ್ಷೇತ್ರಕ್ಕೆ ೨೫೦ ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದಿದ್ದಾರೆ. ಬೈಂದೂರು ಕ್ಷೇತ್ರದ ಪ್ರಗತಿಗೆ ಹಾಗೂ ಜನತೆಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದುರು, ಜಿಪಂ ಸದಸ್ಯ ಬಾಬು ಶೆಟ್ಟಿ, ರೋಹಿತ್ ಶೆಟ್ಟಿ, ಶೋಭಾ ಪುತ್ರನ್, ಸುರೇಶ್ ಬಟವಾಡಿ, ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಮಂಡಲ ಪ್ರಧಾನ ಕಾರ್ಯದರ್ಶಿ ದೀಪಕ್ಕುಮಾರ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶರತ್ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಪ್ರಿಯದರ್ಶಿನಿ, ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಜೈಸನ್, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.