ಕಾಸರಗೋಡು, ಅ 21 (Daijiworld News/MSP): ಶಾಸಕರಾಗಿದ್ದ ಪಿ. ಅಬ್ದುಲ್ ರಜಾಕ್ ರವರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಮೊದಲ ಗಂಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಆದರೆ ಮತದಾನ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದರಿಂದ ಗಂಟೆಗಳ ಕಾಲ ಕ್ಯೂ ನಿಲ್ಲಬೇಕಾದ ಸ್ಥಿತಿ ಮತದಾರರಿಗೆ ಉಂಟಾಗುತ್ತಿದೆ. ಮುಂಜಾನೆಯಿಂದ ಮಳೆ ಸುರಿದಿದ್ದರೂ ಮಳೆಯನ್ನೂ ಲೆಕ್ಕಿಸದೆ ಮತದಾರರು ಮತಗಟ್ಟೆಗೆ ತಲುಪಿ ತಮ್ಮ ಹಕ್ಕು ಚಲಾಯಿಸಿದರು.
ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡು ಬರುತ್ತಿದೆ. ಬಿಗು ಪೊಲೀಸ್ ಬಂದೋ ಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ. ಕೆಲ ಮತಗಟ್ಟೆಗಳಲ್ಲಿ ಮತಯಂತ್ತ ಲೋಪದಿಂದ ಮತದಾನ ವಿಳಂಬವಾದ ಬಗ್ಗೆ ಬರದಿಯಾಗಿದೆ. 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ 198 ಮತಗಟ್ಟೆಗಳಲ್ಲಿ ಮತದಾರರ ವಿಡಿಯೋ ರೆಕಾರ್ಡಿಂಗ್ ನಡೆಸಲಾಗುತ್ತಿದೆ.
ಬಹುತೇಕ ಮತಗಟ್ಟೆಗಳಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಮೊದಲ ಬಾರೀ ಮಂಜೇಶ್ವರ ಉಪಚುನಾವಣೆಗೆ ವೇದಿಕೆಯಾಗುತ್ತಿದ್ದು , ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. 2016 ರಲ್ಲಿ ನಡೆದ ಚುನಾವಣೆಯಲ್ಲಿ ಯು ಡಿ ಎಫ್ ನ ಪಿ . ಬಿ ಅಬ್ದುಲ್ ರಜಾಕ್ ರವರು ಬಿಜೆಪಿಯ ಕೆ . ಸುರೇಂದ್ರನ್ ವಿರುದ್ಧ ಕೇವಲ 89 ಮತಗಳಿಂದ ಗೆಲುವು ಸಾಧಿಸಿದ್ದರು. ಇದರಿಂದ ಈ ಚುನಾವಣೆ ರಾಷ್ಟ್ರ ಮಟ್ಟದಲ್ಲೇ ಗಮನಸೆಳೆಯುತ್ತಿದೆ. 2, 24, 799 ಲಕ್ಷ ಮತದಾರರನ್ನು ಹೊಂದಿರುವ ಮಂಜೇಶ್ವರದಲ್ಲಿ ಕ್ಷೇತ್ರದಲ್ಲಿ 198 ಮತಗಟ್ಟೆಗಳಲ್ಲಿ ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದು , ಸಂಜೆ ಆರರ ತನಕ ನಡೆಯಲಿದೆ .
ಎಲ್ ಡಿ ಎಫ್ ಅಭ್ಯರ್ಥಿ ಎಂ . ಶಂಕರ ರೈ ರವರು ಅಂಗಡಿಮೊಗರು ಹಯರ್ ಸೆಕಂಡರಿ ಶಾಲೆಯ 165 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ ಮೊದಲಿಗರಾಗಿ ಮತಚಲಾಯಿಸಿದರು. ಯುಡಿಎಫ್ ನಿಂದ ಎಂ.ಸಿ ಖಮರುದ್ದೀನ್, ಎಲ್ ಡಿ ಎಫ್ ನಿಂದ ಎಂ .ಶಂಕರ ರೈ, ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ .