ಪುತ್ತೂರು, ಅ 21 (Daijiworld News/MSP): ಪುತ್ತೂರಿನ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಅಕ್ಟೋಬರ್ 21 ರ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಒಳಮೊಗ್ರು ಗಾಮದ ಕೇರಿ ನಿವಾಸಿ ವಿಠಲ್ ರೈ ಅವರ ಪುತ್ರಿ ವೀಣಾ (17) ಮೃತಪಟ್ಟ ದುರ್ದೈವಿ. ಈಕೆ ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು.
ವೀಣಾಳಿಗೆ ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಮುಂಜಾನೆ 4 ಗಂಟೆ ಎದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದ್ರೆ ಆ ಬಳಿಕ ಆಕೆಯ ತಂದೆ ತೋಟದ ಕಡೆ ತೆರಳುವ ಸಂದರ್ಭದಲ್ಲಿ ಮಗಳು ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಡಿದಾಗ, ಆಕೆಯ ಮೃತದೇಹ ಮನೆಯ ಸಮೀಪದಲ್ಲಿದ್ದ ಕೆರೆಯಲ್ಲಿ ಪತ್ತೆಯಾಗಿದೆ. ಪರೀಕ್ಷಾದ ಒತ್ತಡದಲ್ಲಿ ದುಡುಕಿನ ನಿರ್ಧಾರವೇನಾದ್ರೂ ಈಕೆ ಕೈಗೊಂಡಳೇ ಎಂಬ ಸಂಶಯ ವ್ಯಕ್ತವಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ವೀಣಾ ತಂದೆ, ತಾಯಿ ಮತ್ತು ಸಹೋದರರು ಅಗಲಿದ್ದಾರೆ.