ಕುಂದಾಪುರ,ಅ 21 (Daijiworld News/MSP): ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತಲೇ ರಾಷ್ಟ್ರಪತಿಗಳ ಅಂಗೀಕಾರ ಪಡೆದು ರಾಜ್ಯದಲ್ಲಿ ಕುಮಾರಸ್ವಾಮಿ ಜಾರಿಗೆ ತಂದ ಋಣಮುಕ್ತ ಕಾಯ್ದೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಪರಿಣಾಮವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಕುಂದಾಪುರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಾವಿರಾರು ಜನ ಮುಗಿಬಿದ್ದು ಅಚ್ಚರಿ ಮೂಡಿಸಿದ್ದಾರೆ.
ಹೌದು. ಕುಂದಾಪುರದಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮೀಣ ಭಾಗದ ಜನರು ಕುಂದಾಪುರ ನಗರಕ್ಕೆ ಲಗ್ಗೆ ಹಾಕುತ್ತಿದ್ದಾರೆ, ಆದರೆ ಬಂದವರಲ್ಲಿ ಹೆಚ್ಚಿನ ಜನ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ಸಾಗುತ್ತಿರುವುದೂ ಕಂಡು ಬರುತ್ತಿದೆ. ಸೋಮವಾರ ಬೆಳಿಗ್ಗೆಯಿಂದಲೇ ರಾಜ್ಯ ಸರಕಾರ ಜಾರಿಗೆ ತಂದ ಋಣ ಮುಕ್ತ ಕಾಯಿದೆ ಅರ್ಜಿ ಸಲ್ಲಿಸಲು ಕುಂದಾಪುರದ ತಾಲುಕು ಕಚೇರಿ ಮುಂಭಾಗದಲ್ಲಿ ಮುಗಿಬಿದ್ದಿದ್ದರು. ಈ ಕಾಯಿದೆ ಯಾರಿಗೆಲ್ಲಾ ಅನ್ವಯ ಆಗುತ್ತೆ ಅಂತಾ ತಿಳಿದುಕೊಂಡವರು ಒಂದು ಕಡೆ ಅರ್ಜಿ ಹಾಕ್ತಾ ಇದ್ರೆ, ಋಣಮುಕ್ತ ಕಾಯ್ದೆ ಯಾರಿಗೆ ಎನ್ನುವುದೇ ತಿಳಿಯದ ಬಹು ಮಂದಿ ಗೊಂದಲದಲ್ಲಿ ಬಿದ್ದಿರುವುದು ಕಂಡು ಬಂತು.
ಋಣಮುಕ್ತ ಕಾಯ್ದೆ ಎಂದರೇನು? : ಸುಲಭವಾಗಿ ಹೇಳುವುದಾದರೆ ಈ ಕಾಯ್ದೆ ಅಡಿಯಲ್ಲಿ ಚಕ್ರ ಬಡ್ಡಿ ವ್ಯಾಪಾರಿಗಳಿಂದ ಮತ್ತು ಮಾರ್ವಾಡಿಗಳಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡುವ ಕಾಯ್ದೆ. ಆದರೆ ಹೀಗೆ ಸಾಲ ಪಡೆಯುವಾಗ ಯಾವುದಾದರೂ ದಾಖಲೆಗಳನ್ನು ಅಡವಿಟ್ಟಿದ್ದರೆ. ಅಂತಹಾ ದಾಖಲೆಗಳನ್ನು ಅಡವಿಟ್ಟ ಬಗ್ಗೆ ಸಾಲಗಾರರಲ್ಲಿ ದಾಖಲೆಗಳಿದ್ದರೆ ಅದನ್ನು ಸರ್ಕಾರದ ನಿಯೋಜಿತ ಅಧಿಕಾರಿಗಳಿಗೆ ನೀಡಿ ಅರ್ಜಿ ನೋಂದಾಯಿಸಿದರೆ, ನಿಯೋಜಿತ ಅಧಿಕಾರಿಗಳ ಮೂಲಕ ಅಡವಿಡಲಾದ ಸೊತ್ತುಗಳನ್ನು ಬೇಷರತ್ ವಾಪಾಸ್ಸು ಪಡೆದುಕೊಳ್ಳುವ ಅವಕಾಶ ಈ ಕಾಯ್ದೆಯಲ್ಲಿದೆ. ಹಾಗಂತ ಯಾವುದೇ ಸಹಕಾರ ಸಂಘಗಳ ಕಾಯಿದೆಯಡಿ ನೊಂದಣಿಯಾದ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಸಂಘಗಳು, ನೋಂದಾಯಿತ ಫೈನಾನ್ಸ್ ಸಂಸ್ಥೆಗಳಲ್ಲಿ ಮಾಡಿರುವ ಸಾಲಗಳು ಈ ಕಾಯ್ದೆಯಡಿ ಬರುವುದಿಲ್ಲ. ಈ ಬಗ್ಗೆ ತಾಲೂಕು ಕಚೇರಿಯ ಸೂಚನಾ ಫಲಕಗಳಲ್ಲಿ ಹಾಕಲಾಗಿದ್ದರೂ ಜನ ಮಾತ್ರ ಅದನ್ನು ನೋಡದೇ ಅರ್ಜಿ ಸಲ್ಲಿಸಲು ಧಾವಿಸುತ್ತಿರುವುದು ಮುಂದುವರೆಯುತ್ತಿದೆ. ಅಲ್ಲದೇ ಅರ್ಜಿ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದರಿಂದ ಕುಂದಾಪುರ ಬಸ್ ನಿಲ್ದಾಣ ಮತ್ತು ಜೆರಾಕ್ಸ್ ಅಂಗಡಿ ಜನಜಂಗುಳಿಯಿಂದ ತುಂಬಿ ಹೋಗಿತ್ತು.