ಕಾಸರಗೋಡು, ಅ 21 (DaijiworldNews/SM): ಶಾಸಕರಾಗಿದ್ದ ಪಿ . ಬಿ ಅಬ್ದುಲ್ ರಜಾಕ್ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ನಡೆದಿದೆ. ತ್ರಿಕೋಣ ಸ್ಪರ್ಧೆಯನ್ನು ಎದುರಿಸುವ ಮಂಜೇಶ್ವರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶೇಕಡಾ 74. 42 ಮತದಾನವಾಗಿದೆ. ಮತದಾನ ಆರು ಗಂಟೆಯ ಬಳಿಕವೂ ಮುಂದುವರಿದಿದ್ದು, ಶೇಕಡಾವಾರು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. 2016ರಲ್ಲಿ 76.19 ಮತದಾನವಾಗಿತ್ತು. ಇನ್ನು ಇಂದು ಕೆಲವೆಡೆ ಸಣ್ಣ ಪುಟ್ಟ ಘರ್ಷಣೆ, ನಕಲಿ ಮತದಾನ ಆರೋಪ ಹೊರತು ಪಡಿಸಿ ಉಳಿದಂತೆ ಮತದಾನ ಶಾಂತಿಯುತವಾಗಿತ್ತು.
ಮುಂಜಾನೆಯಿಂದ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ತೆರಳುವ ದೃಷ್ಯಗಳು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಶೇಕಡಾ 38 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ ನಂತರವೂ ಮತದಾನ ಪ್ರಮಾಣ ಹೆಚ್ಚಳಗೊಂಡಿತು. ಮತದಾನ ಅವಧಿ ಮುಗಿದ ಬಳಿಕವೂ ಮತಗಟ್ಟೆಯಲ್ಲಿ ನೂರಾರು ಮಂದಿ ಸರತಿ ಸಾಲಿನಲ್ಲಿದ್ದು,ಆರು ಗಂಟೆಗೆ ಸರತಿ ಸಾಲಿನಲ್ಲಿದ್ದವರಿಗೆ ಟೋಕನ್ ನೀಡಿ ಮತಚಲಾಯಿಸಲು ಅನುವು ಮಾಡಿಕೊಡಲಾಯಿತು.
ಕ್ಷೇತ್ರದ 198 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಮತಗಟ್ಟೆಗಳಲ್ಲಿ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಮಾಡಲಾಗಿತ್ತು.