ಪುತ್ತೂರು, ಅ 22 (Daijiworld News/MSP): ನಗರದ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಯುವ ಜೋಡಿ ಪತ್ತೆಯಾದ ಪ್ರಕರಣದಲ್ಲಿ ಯುವಕನ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ಹಿನ್ನಲೆಯಲ್ಲಿ ಮುಂಬಯಿಯ ಯುವಕ ಅಬ್ದುಲ್ ತಯ್ಯದ್ (19) ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮುಂಬಯಿಯ ತಯ್ಯದ್ ಪುತ್ತೂರಿಗೆ ಆಗಮಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ, ಸ್ಥಳೀಯವಾಗಿ ವಾಸ್ತವ್ಯ ಹೊಂದಿರುವ ರಾಜಸ್ತಾನ ಮೂಲದ ಕಾಲೇಜು ವಿದ್ಯಾರ್ಥಿನಿ ಯುವತಿಯನ್ನು ವಸತಿಗೃಹಕ್ಕೆ ಕರೆಯಿಸಿಕೊಂಡಿದ್ದಾನೆ. ಈ ವೇಳೆ ಇವರಿಬ್ಬರು ಹೊಟೇಲ್ ನಲ್ಲಿರುವ ಮಾಹಿತಿ ಪಡೆದು ಪತ್ತೆಹಚ್ಚಿದ ಹಿಂದೂ ಸಂಘಟಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು, ಯುವತಿಯ ಹೆತ್ತವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅರೋಪಿ ತಯ್ಯದ್ ನಾಲ್ಕು ತಿಂಗಳ ಹಿಂದೆ ಅಂದರೆ ಜೂನ್ ನಲ್ಲಿ ಆಗಮಿಸಿ ಅದೇ ಹೊಟೇಲ್ ನಲ್ಲಿ ತಂಗಿದ್ದ. ಈ ವೇಳೆ ಯುವತಿಯನ್ನು ರೂಂಗೆ ಕರೆಯಿಸಿಕೊಂಡಿದ್ದ ಯುವಕ ಯುವತಿ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆ ಬಳಿಕ ಎರಡನೇ ಬಾರಿ ಸಂತ್ರಸ್ಥ ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್ ಗೆ ಬರಹೇಳಿದ್ದು, ಭೇಟಿಯಾಗಲು ತೆರಳಿದ ಆಕೆಗೆ ಲಾಡ್ಜ್ ನಲ್ಲಿ ಇಚ್ಚೆಗೆ ವಿರುದ್ದ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ