ಕಾಸರಗೋಡು, ಅ 23 (DaijiworldNews/SM): ಮಂಜೇಶ್ವರ ಉಪ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 24ರಂದು ನಡೆಯಲಿದ್ದು, ಮತಎಣಿಕೆ ಹಿನ್ನಲೆಯಲ್ಲಿ ಮಂಜೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಮತ ಎಣಿಕಾ ಕೇಂದ್ರವಾದ ಪೈವಳಿಕೆ ಪರಿಸರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಸ್ಥಳೀಯ ಪೊಲೀಸ್ ಅಲ್ಲದೆ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಇನ್ನು ಗೆಲುವು ಸಾಧಿಸಿದ ಪಕ್ಷಕ್ಕೆ ಮಾತ್ರ ವಿಜಯೋತ್ಸವ ನಡೆಸಲು ಅನುಮತಿ ನೀಡಲಾಗಿದೆ.
ಪೊಲೀಸರು ಪೂರ್ವಾನುಮತಿ ನೀಡಿದ ಸ್ಥಳಗಳಲ್ಲಿ ಮಾತ್ರ ವಿಜಯೋತ್ಸವ ಆಚರಿಸಬಹುದಾಗಿದೆ. ಸಂಜೆ ಆರು ಗಂಟೆ ನಂತರ ವಿಜಯೋತ್ಸವ ನಡೆಸುವಂತಿಲ್ಲ. ಕಾನೂನು ಉಲ್ಲಂಘಿಸಿ ಮೆರವಣಿಗೆ ನಡೆಸಿದ್ದಲ್ಲಿ, ತೆರೆದ ವಾಹನಗಳಲ್ಲಿ ವಿಜಯೋತ್ಸವ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಇನ್ನು ಬೈಕ್ ರ್ಯಾಲಿಯನ್ನು ನಿಷೇಧಿಸಲಾಗಿದೆ. ಸಂಚಾರಕ್ಕೆ ಅಡ್ಡಿಯಾಗದಂತೆ ಮೆರವಣಿಗೆ ನಡೆಸಬೇಕು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.