ಕುಂದಾಪುರ, ಅ 24 (Daijiworld News/MSP): ರಾಜ್ಯ ಸರ್ಕಾರ ಜ್ಯಾರಿಗೆ ತಂದ ಋಣಮುಕ್ತ ಕಾಯ್ದೆಯ ಗೊಂದಲ ಉಡುಪಿ ಜಿಲ್ಲೆಯಲ್ಲಿ ಇನ್ನೂ ಬಗೆಹರಿದಿಲ್ಲ. ಸೋಮವಾರ ಮತ್ತು ಮಂಗಳವಾರ ಕುಂದಾಪುರದ ಮಿನಿವಿಧಾನ ಸೌಧದಲ್ಲಿ ಸಹಾಯಕ ಕಮೀಷನರ್ ಕಚೇರಿಯಲ್ಲಿ ಜನ ಸಾಗರದ ಸುದ್ಧಿಯನ್ನು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ನೋಡಿದ ಜಿಲ್ಲೆಯ ಜನ ಬುಧವಾರ ಬೆಳಿಗ್ಗೆ ಬಾಡಿಗೆ ವಾಹನಗಳನ್ನು ಮಾಡಿಕೊಂಡು ತಂಡೋಪತಂಡವಾಗಿ ಆಗಮಿಸಿ ಗೊಂದಲ ಸೃಷ್ಟಿಸಿದ ಘಟನೆಯು ನಡೆಯಿತು.
ಜಿಲ್ಲೆಯ ಉಡುಪಿ, ಕಾರ್ಕಳ, ಹೆಬ್ರಿ, ಬೈಂದೂರು, ಅಮಾಸೆಬೈಲು, ಶಿರೂರು, ಮೊದಲಾದೆಡೆಗಳಿಂದ ಬಾಡಿಗೆ ವಾಹನದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಮಂದಿ ಕುಂದಾಪುರದ ಮಿನಿವಿಧಾನಸೌಧಕ್ಕೆ ಆಗಮಿಸಿ ಬರಿಗೈಯಲ್ಲಿ ಹಿಂತಿರುಗಿದ ಘಟನೆ ನಡೆದಿದೆ. ಬಂದ ರೈತರು, ಕೃಷಿಕರು ಅರ್ಜಿ ನೀಡಲು ಬಂದಾಗ ಅಧಿಕಾರಿಗಳು ಕೊನೆಯ ದಿನ ನಿನ್ನೆಗೆ ಮುಗಿದಿದೆ ಎಂದಾಗ ಬಂದವರು ಆಕ್ರೋಶಿತರಾದರು. ತಮದ ಅರ್ಜಿಗಳನ್ನು ಸ್ವೀಕರಿಸುವಂತೆ ಆಗ್ರಹಿಸಿದರು. ಆದರೆ ಸರ್ಕಾರ ಅವಧಿ ವಿಸ್ತರಣೆ ಮಾಡಿದರೆ ಮಾತ್ರ ಸ್ವೀಕರಿಸುತ್ತೇವೆ ಎಂದಾಗ ಹಾಗಾದರೆ ನಿನ್ನೆ ಸ್ವೀಕರಿಸಿದ ಅರ್ಜಿಗಳನ್ನು ಹರಿದು ಹಾಕಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಬ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ನೊಟೀಸು ಬೋರ್ಡಿನಲ್ಲಿ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ ನೋಟೀಸು ಬೋರ್ಡು ನೋಡಲು ನಾವು ಇಲ್ಲಿಗೆ ಬರಬೇಕಾ? ಎಂದು ಪ್ರಶ್ನಿಸಿದರು.
ಘಟನೆ ವಿಕೋಪಕ್ಕೆ ತಿರುಗಿತ್ತಿದ್ದಂತೆ ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿದರು. ಬಳಿಕ ನೆರೆದ ಅರ್ಜಿದಾರರೊಡನೆ ಪೊಲೀಸರು ಸಂಧಾನ ನಡೆಸಿದರೂ ಪ್ರಯೋಜನವಾಗಲಿಲ್ಲ. ಮಧ್ಯಾಹ್ನದ ವರೆಗೆ ಕಾದು ಸುಸ್ತಾದ ಅರ್ಜಿದಾರರು ಬಳಿಕ ತಂದ ಅರ್ಜಿಗಳನ್ನು ಅಲ್ಲಿಯೇ ಬೀಸಾಡಿ ಹಿಂತಿರುಗಿದರು.
ದಾರಿ ತಪ್ಪಿಸಿದ ಬ್ರೋಕರ್ಗಳು: ಋಣಮುಕ್ತ ಕಾಯ್ದೆಯ ಬಗ್ಗೆ ಅಲ್ಲಲ್ಲಿ ಕೆಲಸ ಮಾಡುವ ಬ್ರೋಕರ್ಗಳು, ಅರ್ಜಿ ಬರೆದುಕೊಡುವವರು, ಜೆರಾಕ್ಸ್ ಅಂಗಡಿಯವರು ಗ್ರಾಮೀಣ ಭಾಗದ ರೈತರು ಹಾಗೂ ಕೃಷಿಕರಿಗೆ ಮಾಹಿತಿಗಳನ್ನು ತಿರುಚಿ ಹೇಳಿದ್ದೇ ಕಾರಣ ಎಂದು ತಿಳಿದು ಬಂದಿದೆ. ಚಿನ್ನದ ಸಾಲ ಎಲ್ಲವೂ ಮನ್ನಾ ಆಗುತ್ತದೆ ಎಂದು ಹೇಳಿದ್ದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೇ ಪ್ರತಿಯೊಬ್ಬ ಅರ್ಜಿದಾರ ತಲಾ ೨೦೦ ರೂಪಾಯಿ ವಾಹನ ಬಾಡಿಗೆ ನೀಡಿದ್ದರೆ, ಜೆರಾಕ್ಸ್ ಹಾಗೂ ಅರ್ಜಿ ಬರೆಯವವರು ಒಟ್ಟು ಸೇರಿ ಒಂದು ಅರ್ಜಿ ಫಾರಂ ಭರ್ತಿ ಮಾಡಲು ೧೫೦ ರಿಂದ ೨೦೦ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿದೆ. ಕುಂದಾಪುರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬ್ರೋಕರ್ಗಳಿಗೆ ಹಾಗೂ ಅರ್ಜಿ ಬರೆದುಕೊಡುವವರಿಗೆ ಮತ್ತು ಜೆರಾಕ್ಸ್ ಅಂಗಡಿಯವರಿಗೆ ಋಣಮುಕ್ತ ಕಾಯ್ದೆಯಿಂದಾಗಿ ಬಂಪರ್ ವ್ಯಾಪಾರ ಕುದುರಿದ್ದಂತೂ ಸುಳ್ಳಲ್ಲ