ಮಂಗಳೂರು ಜ 07: ಕೊಟ್ಟಾರ ಚೌಕಿ ಬಳಿ ಜ.3ರಂದು ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿ ಎಜೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್ (45) ಇಂದು ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು , ಅವರ ಅಂತ್ಯಕ್ರಿಯೆಗೆ ಸಿದ್ದತೆ ಸಾಗಿದೆ. ಮೃತದೇಹವನ್ನು ಮಧ್ಯಾಹ್ನ 2.30 ರ ವೇಳೆಗೆ ಆಸ್ಪತ್ರೆಯ ಶವಾಗಾರದಿಂದ ಅಂಬುಲೆನ್ಸ್ನಲ್ಲಿ ಮನೆಗೆ ಸಾಗಿಸಲಾಗಿದ್ದು ಬಳಿಕ ಆಕಾಶ ಭವನದಲ್ಲಿರುವ ಬಶೀರ್ ಅವರ ನಿವಾಸದಲ್ಲಿ ಮಹಿಳೆಯರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಮೃತದೇಹದ ಅಂತಿಮ ದರ್ಶನಕ್ಕೆಂದು ವ್ಯವಸ್ಥೆ ಮಾಡಲಾಗಿತ್ತು.
ಬಳಿಕ ಕುಳೂರಿನ ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ,ಬಶೀರ್ ಅವರ ಕಿರಿಯ ಪುತ್ರ ಅಬುದಾಬಿಯಲ್ಲಿದ್ದು ಅವರಿಗಾಗಿ ಕಾಯಲಾಗುತ್ತಿದ್ದು ಸಂಜೆ ಅವರು ಬಂದೊಡನೆಯೇ ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.