ಕಾರ್ಕಳ, ಅ 24 (Daijiworld News/MSP): ತಂತ್ರಜ್ಞಾನಯುಗದಲ್ಲೂ ಮಣ್ಣಿಗೆ ಮಣ್ಣಿನದೇ ಗುಣಗಳಿವೆ. ಮಾನವನ ಬದುಕಿಗೆ ಪೂರಕವಾಗಿ ಮಣ್ಣಿನಿಂದ ಸಿದ್ಧಪಡಿಸಿದ ಪರಿಕರಗಳು ಕಾಣಬಹುದಾಗಿದೆ.
ಮಣ್ಣಿನ ಪರಿಕರಗಳು ಆರೋಗ್ಯದ ಮೇಲೂ ಧನಾತ್ಮಕ ಗುಣಹೊಂದಿದೆ. ಲೋಹ ಪಾತ್ರೆಗಿಂತ ಮಣ್ಣಿನಿಂದ ಸಿದ್ಧಪಡಿಸಿದ ಪಾತ್ರೆಗಳನ್ನು ಆಹಾರ ತಯಾರಿಕೆಗೆ ಬಳಸಿದರೆ ಅದರಿಂದ ಸ್ವಾದಿಷ್ಠತೆ ಹೆಚ್ಚುತ್ತದೆ. ಸಿದ್ಧಪಡಿಸಿದ ಆಹಾರ ಹೆಚ್ಚುಕಾಲದ ವರೆಗೆ ಕೆಡವದೇ ಉಳಿದುಕೊಳ್ಳುತ್ತದೆ. ಅದೇ ಕಾರಣದಿಂದ ಪ್ರಸಕ್ತ ಕಾಲಘಟ್ಟದಲ್ಲಿ ಮಣ್ಣಿನ ಪಾತ್ರೆಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದ್ದು, ಹಳ್ಳಿಗರಿಂದಲೇ ಅವುಗಳ ಉಳಿವು ಕಾರ್ಯ ನಡೆಯುತ್ತಿದೆ. ಬಜಗೋಳಿ-ರಾಷ್ಟ್ರೀಯ ಹೆದ್ದಾರಿಯ ಸುಮ್ಮ ಕಡಾರಿ ಎಂಬಲ್ಲಿನ ವಯೋವೃದ್ಧೆ ಮೀನಾ ಕುಲಾಲ್(70) ಅವರು ಬಡತನದ ಬೇಗೆಯ ನಡುವೆ ಬಾಲ್ಯವಸ್ಥೆಯಿಂದಲೇ ಈ ಕಸುಬು ಮಾಡುತ್ತಾ ಬಂದಿದ್ದಾರೆ. ಕುಂಬಾರಿಕೆಯ ವೃತ್ತಿ ಅವರ ಬದುಕಿಗೆ ಬುತ್ತಿಯಾಗಿದೆ.
ಕಾಪು ಮಣ್ಣಿಗೆ ಸ್ಥಳೀಯ ಜೇಡಿ ಮಣ್ಣು
ಮಣ್ಣಿನ ಪರಿಕರ ತಯಾರಿಗೆ ಬೇಕಾದ ಮಣ್ಣನ್ನು ಕಾಪುವಿನಿಂದ ತರುತ್ತಾರೆ. ಅಲ್ಲಿಂದ ತಂದ ಮಣ್ಣಿಗೆ ಸ್ಥಳೀಯ ಜೇಡಿ(ಶೇಡಿ)ಮಣ್ಣನ್ನು ಬೆರೆಸಿ ಹದ ಮಾಡುತ್ತಾರೆ. ಆ ಸಂದರ್ಭದಲ್ಲಿ ಮಣ್ಣಿನಲ್ಲಿ ಕಲ್ಲು, ಕಸ ಇರದಂತೆ ಜಾಗೃತಿವಹಿಸುತ್ತಾರೆ. ಮಣ್ಣಿನ ಮಡಕೆ ಆಗಿಂದಾಗಲೇ ಮಾಡಲಾಗುವುದಿಲ್ಲ. ಒಂದೆರಡು ದಿನ ಇರಿಸಿ ಅಂಟು ಬರುವಂತೆ ಮಾಡುತ್ತಾರೆ. ಈ ಹಿರಿಯ ಜೀವಕ್ಕೆ ಮಕ್ಕಳಾದ ಶೋಭಾ, ಸಮಿತ್ರಾ ಕೈ ಜೋಡಿಸುತ್ತಾರೆ.
ಕಂಪೆನಿಗಳು ತಯಾರಿಸುವ ಮಣ್ಣಿನ ಪಾತ್ರೆ ಹಾಗೂ ಕರಗಳಿಂದ ತಯಾರಿಸುವ ಸಿದ್ಧಪಡಿಸುವ ಪರಿಕರಗಳಿಗೆ ತುಂಬ ವ್ಯತ್ಯಾಸವಿದೆ. ಕರಗಳಿಂದ ತಯಾರಿಕೆ ಮಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಒಡೆಯುತ್ತದೆ. ಹೊಂಡದಲ್ಲಿ ಇದ್ದಿಲಿನ ಸಿದ್ಧ ಕೆಂಡದ ಮೇಲ್ಬಾಗದಲ್ಲಿ ಕಟ್ಟಿಗೆಯನ್ನು ಜೋಡಿಸಿ ಸಿದ್ಧಗೊಂಡ ಪರಿಕರಗಳನ್ನು ಕವಚಿಟ್ಟು ಅದರ ಮೇಲ್ಬಾಗದಲ್ಲಿ ಬೈಹುಲ್ಲು, ಮುಳ್ಳಿಹುಲ್ಲಿನಿಂದ ಮುಚ್ಚಿ ತೆಳು ಮಣ್ಣಿನ ಪದರನ್ನು ಸವರುತ್ತಾರೆ. ಕುಲುವೆಯಿಂದ ಬೆಂಕಿಯ ಜ್ವಾಲೆ ಹೆಚ್ಚಿಸುತ್ತಾರೆ. ಆ ಮೂಲಕ ಪರಿಕರಗಳನ್ನು ಸುಮಾರು 12 ಗಂಟೆಗಳ ಕಾಲ ಬೆಂಕಿಯಲ್ಲಿ ಬೇಯಿಸುತ್ತಾರೆ.
ಮಾಹಿತಿಗಾಗಿ ಬರುತ್ತಾರೆ
ಮಣ್ಣಿನ ಉತ್ಪನ್ನ ತಯಾರಿಕೆಯನ್ನು ವೀಕ್ಷಿಸಲು ಕಾರ್ಕಳದ ಮಾನಸ ಕಲಾಶಾಲೆಯ ಕಲಾ ವಿದ್ಯಾರ್ಥಿಗಳು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡಿ ಕಾರ್ಯಗಾರದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸ್ಥಳೀಯ ವಿದ್ಯಾರ್ಥಿಗಳಿಗೆ ಹದಮಾಡಿದ ಮಣ್ಣನ್ನು ನೀಡುತ್ತಿದ್ದಾರೆ.
ವೈವಿದ್ಯಮಯವಾದ ಪಾತ್ರೆ
ಇವರು ವೈವಿಧ್ಯಮಯವಾದ ಮಣ್ಣಿನ ಪಾತ್ರೆ ಪರಿಕರಗಳನ್ನು ತಯಾರು ಮಾಡುತ್ತಿದ್ದಾರೆ. ಕಪ್ಪರೊಟ್ಟಿ ಓಡು(ಕಾವಲಿ), ಬಿಸಲೆ(ಚಟ್ಟಿ), ಕರ(ಮಡಿಕೆ), ಮೊಗಾಯಿ(ಕುಂಬ), ಗಡಿಗೆ(ಕೊಡಪಾನ), ಗದ್ದವು(ಊಟದ ಬಟ್ಟಲು), ಒಗ್ಗಿದ ಗದ್ದವು(ಮಕ್ಕಳ ಊಟದ ಬಟ್ಟಲು), ತಿಬುಲ(ಹಣತೆ),ಅಡ್ಯಾರ(ಅಡಿಗಾರ) , ಮರಾಯಿ(ಜಾನುವಾರುಗಳಿಗೆ ನೀರು ಶೇಖರಣಿಗೆ ಇಡುವ ದೊಡ್ಡ ಪಾತ್ರೆ) ಮೊದಲಾದ ಪರಿಕರಗಳನ್ನು ತಯಾರು ಮಾಡುತ್ತಿದ್ದಾರೆ.
ನೆರೆಹೊರೆ ಅಕ್ಕರೆಯ ಮೀನಾ
ಎಳೆ ವಯಸ್ಸಿನಿಂದ ಇಳಿ ವಯಸ್ಸಿನ ವರೆಗೆ ಕುಂಬಾರಿಕೆಯನ್ನೇ ವೃತ್ತಿಯನ್ನಾರಿಸಿ ಕುಟುಂಬಕ್ಕೆ ಆಸರೆಯಾಗಿ ನಿಂತ ಮೀನಾ ಮೂಲ್ಯ ಅವರು ಪ್ರಾಮಾಣಿಕರು ಅನ್ನುತ್ತಾರೆ ನೆರೆಹೊರೆಯ ಬದ್ರುನ್ನಿಸಾ.