ಬಂಟ್ವಾಳ, ಅ 24 (Daijiworld News/MSP): ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಛೇರಿ ಸ್ಥಳಾಂತರದ ಬಗ್ಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಬಂಟ್ವಾಳಕ್ಕೆ ಗುರುವಾರ ಆಗಮಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ, ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಬೆಳಗ್ಗೆ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಜಿಲ್ಲಾ ಎಸ್ಪಿ ಕಛೇರಿ ಪುತ್ತೂರಿಗೋ, ಬಂಟ್ವಾಳಕ್ಕೋ ಎಂಬ ಪತ್ರಕರ್ತರ ಪ್ರಶ್ಬೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಶೀಘ್ರ ಸಭೆ ನಡೆಸುವುದಾಗಿ ತಿಳಿಸಿದರು.
ಬಂಟ್ವಾಳ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು, ಬಂಟ್ವಾಳ ನಗರ ಹಾಗೂ ಗ್ರಾಮಾಂತರಕ್ಕೆ ಪ್ರತ್ಯೇಕ ವೃತ್ತನಿರೀಕ್ಷಕರನ್ನು ನೇಮಿಸಲಾಗುವುದು, ಈ ಸಂದರ್ಭ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಲಿದೆ, ಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕರಾವಳಿಯ ಭದ್ರತಾ ಪಡೆಯ ಬಲವರ್ಧನೆಗೊಳಿಸಿ, ತೀರ ಪ್ರದೇಶ ಸುರಕ್ಷತೆಗೆ ಗರಿಷ್ಠ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗಿ ಹೇಳಿದರು. ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಪೊಲೀಸ್ ಕ್ವಾಟ್ರಸ್ ಇದ್ದು, ಶೇ.60ರಷ್ಟು ಇರುವ ಕ್ವಾಟ್ರಸ್ ಗಳ ಸಂಖ್ಯೆಯನ್ನು ಮುಂದಿನ ಮೂರುವರ್ಷಗಳಲ್ಲಿ ಶೇ.80ಕ್ಕೆ ಏರಿಸುವ ಗುರಿ ಇರಿಸಲಾಗಿದೆ ಎಂದು ಹೇಳಿದ ಬೊಮ್ಮಾಯಿ, ರಾತ್ರಿ ಡ್ಯೂಟಿ ಮಾಡುವ ಪೊಲೀಸರ ಜೊತೆ ಜನರನ್ನೂ ಪಾಲ್ಗೊಳ್ಳುವಂತೆ ಮಾಡುವ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
ಶಾಸಕ ಯು.ರಾಜೇಶ್ ನಾಯ್ಕ್ , ಬಂಟ್ವಾಳಕೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು,ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್.ಜಿ.ಕೆ., ಪ್ರ.ಕಾರ್ಯದರ್ಶಿ ರಾಮದಾಸ್ಬಂಟ್ವಾಳ, ತಾಪಂ ಸದಸ್ಯ ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ರಾವ್ ಬಂಟ್ವಾಳ, ರಮಾನಾಥ ರಾಯಿ, ಸುದರ್ಶನ್ ಬಜ ಮೊದಲಾದವರಿದ್ದರು.
ಇದೇ ಮೊದಲ ಬಾರಿಗೆ ಬಂಟ್ವಾಳಕ್ಕಾಗಮಿಸಿದ ಗೃಹಸಚಿವರನ್ನು ಶಾಸಕ ಯು.ರಾಜೇಶ್ ನಾಯ್ಕ್ ಹಾಗೂ ತಹಸೀಲ್ದಾರ್ ರಶ್ಮಿ ಎಸ್.ಆರ್. ಸ್ವಾಗತಿಸಿದರು. ಜೊತೆಗೆ ಗೃಹಸಚಿವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ, ದ.ಕ.ಜಿಲ್ಲಾ ಎಸ್ಪಿಲಕ್ಷ್ಮೀಪ್ರಸಾದ್, ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಚಿಕ್ಕಮಗಳೂರು ಎಸ್ಪಿ ಹರೀಶ್ಪಾಂಡೆ, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಪ್ರಸನ್ನ ಸಹಿತ ವಿವಿಧ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಬಂದೋಬಸ್ತ್ ವಹಿಸಿದ್ದರು