ಮಂಗಳೂರು, ಅ 24 (DaijiworldNews/SM): ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್ ಕುಮಾರ್ ಗೆ ಮರಣ ದಂಡನೆ ವಿಧಿಸಿ ಮಂಗಳೂರು ಆರನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 17ನೇ ಪ್ರಕರಣದಲ್ಲಿ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಳಿಸಿದ್ದ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೋಹನ್ ಧೋಷಿ ಎಂಬುದಾಗಿ ಅಕ್ಟೋಬರ್ 22ರ ಮಂಗಳವಾರದಂದು ಘೋಷಿಸಿತ್ತು. ಹಾಗೂ ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಅಕ್ಟೋಬರ್ ೨೪ಕ್ಕೆ ಕಾಯ್ದಿರಿಸಿತ್ತು.
ಇಂದು ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯ ಮೋಹನ್ ಗೆ ಮರಣದಂಡನೆ ವಿಧಿಸಿ ನ್ಯಾಯಾಧೀಶೆ ಸಯಿದುನ್ನೀಸಾ ತೀರ್ಪು ನೀಡಿದ್ದಾರೆ. ಇನ್ನು ಹೈಕೋರ್ಟ್ ನಿಂದ ತೀರ್ಪು ಸಮ್ಮತಿಯಾದ ಬಳಿಕ ಧೋಷಿಗೆ ಶಿಕ್ಷೆಯಾಗಲಿದೆ ಎಂದು ಸರಕಾರಿ ಅಭಿಯೋಜಕಿ ಜುಡಿತ್ ಕ್ರಾಸ್ತಾ ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ. ಇನ್ನೂ ಕೂಡ ಸೈನೆಡ್ ಮೋಹನ್ ನ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದುಕೊಂಡಿವೆ.
ಪ್ರಕರಣದ ಹಿನ್ನೆಲೆ:
2009ರ ಸೆಪ್ಟೆಂಬರ್ 21ರಂದು ಆರೋಪಿಯ ಬಂಧನವಾಗಿ ವಿಚಾರಣೆ ನಡೆಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸೈನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆ ಅಂದಿನ ಇನ್ಸ್ಪೆಕ್ಟರ್ ಲಿಂಗಪ್ಪ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು.
ಆ ಬಳಿಕ ಸಿಒಡಿ ಇನ್ಸ್ಪೆಕ್ಟರ್ ವಜೀರ್ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ 41 ಸಾಕ್ಷಿಗಳ ವಿಚಾರಣೆ ನಡೆಸಿ, 67 ದಾಖಲೆ ಪರಿಗಣಿಸಿ ಅಪರಾಧ ಸಾಬೀತು ಪಡಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತ ವಾದಿಸಿದ್ದರು.