ಬೆಳ್ತಂಗಡಿ, ಅ 25 (Daijiworld News/MSP): ಬಡವರಿಗಾಗಿ ಸರಕಾರಗಳು ಅದೆಷ್ಟೋ ಯೋಜನೆಗಳನ್ನು ತಂದಿದೆ ಮತ್ತು ತರುತ್ತಿದೆ. ಆದರೆ ಆ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ನಿರ್ದಶನವಿದೆ.
ಅದೊಂದು ಇಂದೋ ನಾಳೆಯೋ ಕುಸಿಯುವ ಹಂತದಲ್ಲಿರುವ ಗುಡಿಸಲು ,ಕೇವಲ ಒಂದೇ ಒಂದು ಕೋಣೆ. ಕೋಣೆ ತುಂಬಾ ಕೆಸರು ಆ ಗುಡಿಸಲಿಗೆ ತೆಂಗಿನಗರಿಯ ಹೊದಿಕೆ. ಅದರಲ್ಲಿ ಸನ್ಯಾಸಿಯಂತೆ ಗಡ್ಡ,ಕೂದಲು ಬಿಟ್ಟ ವ್ಯಕ್ತಿಯೊಬ್ಬ ಅತ್ಯಂತಹೀನ ಸ್ಥಿತಿಯಲ್ಲಿದ್ದಾನೆ. .
ಇದು ಯಾವುದೇ ಸಿನಿಮಾ, ಕಥೆ ಕಾದಂಬರಿಯ ವಿವರಣೆಯಲ್ಲ. ಬದಲಾಗಿ ಸವಣಾಲು ಗ್ರಾಮದ ಹಿರಿಯಾಜೆ ಲಕ್ಷ್ಮಿಬೆಟ್ಟು ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುರೇಶ ಎಂಬವರ ಬದುಕಿನ ನೈಜಚಿತ್ರಣ. ಇವರಿಗೆ ಸರಿಸುಮಾರು ೪೦ ವರ್ಷ ಆಗಿರಬಹುದು. ಮದುವೆಯಾಗಿ ಹೆಂಡತಿ, 3 ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಸುರೇಶ್ ಯಾವುದೋ ಕಾರಣದಿಂದಾಗಿ ಮಾನಸಿಕ ಖಿನ್ನತೆಗೊಳಗಾದಾಗ ಅವರ ಹೆಂಡತಿ ಮಕ್ಕಳೊಂದಿಗೆ ಸಮೀಪದ ಗ್ರಾಮದ ತವರು ಮನೆ ಸೇರಿದರು.
ಹೀಗಾಗಿ ಕಳೆದ ಏಳೆಂಟು ವರ್ಷಗಳಿಂದ ಸುರೇಶ್ ಅವರದು ಒಬ್ಬಂಟಿ ಬದುಕು. ಅದು ಯಾವುದೇ ಜೀವಂತವಾಗಿರುವ ಮನುಷ್ಯ ವಾಸಿಸಲು ಅಯೋಗ್ಯವಾದ ಗುಡಿಸಲಿನಲ್ಲಿ. ಆ ಗುಡಿಸಲಿನ ಸುತ್ತಮುತ್ತಲು ಕೆಸು ಸೇರಿದಂತೆ ಎತ್ತರವಾಗಿ ಬೆಳೆದು ನಿಂತಿರುವ ಗಿಡಗಂಟಿಗಳು. ಯಾವುದೇ ಸರಿಸೃಪಗಳು ಮನೆಯೊಳಗೆ ಸೇರಿದರೂ ಗೊತ್ತಾಗದ ರೀತಿಯ ಜೀವನ ಈ ಸುರೇಶ್ ಅವರದು.
ಇವರ ಈ ಗುಡಿಸಲು ಸರ್ಕಾರಿ ಜಮೀನಿನಲ್ಲಿದ್ದು , ಜಮೀನಿನ ಯಾವುದೇ ರೀತಿಯ ದಾಖಲೆಗಳಿಲ್ಲ. ಪಡಿತರಚೀಟಿ , ಆಧಾರ್ಕಾರ್ಡ್, ಚುನಾವಣಾ ಗುರುತು ಚೀಟಿ ಯಾವುದೂ ಇವರ ಬಳಿ ಇಲ್ಲ. ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆ ಮಾಡಲು ಹಣಕಾಸಿನ ಸಮಸ್ಯೆಯಿದೆ.
ದಲಿತ ಸಮುದಾಯದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಸರ್ಕಾರ ಮೀಸಲಿಡುತ್ತಿದ್ದರೂ , ಸುರೇಶ್ ಅವರಂತೆಯೇ ಜೀವಿಸುತ್ತಿರುವವರ ಪಾಲಿಗೆ ಮಾತ್ರ ಗಗನ ಕುಸುಮವಾಗಿದೆ. ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಶೇಕಡಾ ೨೫ ರಷ್ಟುಅನುದಾನ ಮೀಸಲಿಟ್ಟರೂಅದು ಸುರೇಶ್ ಅವರಂತಹ ಅರ್ಹರಿಗೆ ಸಿಗದೆ ವ್ಯರ್ಥವಾಗುತ್ತಿರುವುದು ದುರಂತವಾಗಿದೆ.
ಸುರೇಶ್ ಅವರ ಗುಡಿಸಲಿಗೆ ಬುಧವಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೆ.ಇ ಜಯರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ನಳಿನಿ , ಸಾಮಾಜಿಕ ಕಾರ್ಯಕರ್ತ ರಾಜೇಶ್ ಭಟ್ ಸವಣಾಲು , ನ್ಯಾಯವಾದಿ ಕಿರಣ್ಕುಮಾರ್ , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಜಿಲ್ಲಾ ಸಹ ಸಂಚಾಲಕ ಶೇಖರ್ಎಲ್ , ದಸಂಸ (ಅಂಬೇಡ್ಕರ್ ವಾದ) ದಗ್ರಾಮ ಸಮಿತಿ ಸಂಚಾಲಕ ಚಂದ್ರಶೇಖರ ನೇರಮೆ ಈ ಸಂದರ್ಭ ಜೊತೆಗಿದ್ದರು.
ಈ ಸಂದರ್ಭ ಮಾತನಾಡಿದ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಕೆ.ಇ ಜಯರಾಂ, ಮಾನವೀಯ ನೆಲೆಯಲ್ಲಿ ಸೂಕ್ತ ದಾಖಲೆಗಳನ್ನು ಮಾಡಿಕೊಟ್ಟು , ಬೆಚ್ಚಗಿನ ನೆಲೆಯನ್ನುಕಟ್ಟಿಕೊಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.