ಕುಂದಾಪುರ, ಅ 25 (Daijiworld News/MSP): ಗ್ರಾಮೀಣ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಹಮ್ಮಿಕೊಳ್ಳುವ ಕೃಷಿ ಅಧ್ಯಯನ ಪ್ರವಾಸವನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳ ಸಂಬಂಧಿಕರೇ ದುರುಪಯೋಗಪಡಿಸಿಕೊಂಡು ಸಿಕ್ಕಿಬಿದ್ದ ಘಟನೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಎದುರು ಗುರುವಾರ ರಾತ್ರಿ ನಡೆದಿದೆ. ಪ್ರವಾಸಕ್ಕೆ ಸಿದ್ದವಾಗಿದ್ದ ಬಸ್ಸನ್ನು ತಡೆದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪ್ರವಾಸ ತಡೆದಿದ್ದಾರೆ.
ಜಿಲ್ಲಾ ಪಂಚಾಯತ್ ಉಡುಪಿ, ಕೃಷಿ ಇಲಾಖೆ ಕುಂದಾಪುರ, ಜಲಾನಯನ ಸಮಿತಿ ಹಟ್ಟಿ ಯಂಗಡಿ ಇವರ ಸಹಯೋಗದೊಂದಿಗೆ ರೈತರಿಗೆ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆಯಡಿಯಲ್ಲಿ ಮೈಸೂರು ಹಾಗೂ ಬೆಂಗಳೂರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಇದು ಸಂಪೂರ್ಣವಾಗಿ ಸರ್ಕಾರದ ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು ರೈತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಗುರುವಾರ ರಾತ್ರಿ ಹಟ್ಟಿಯಂಗಡಿ ಪಂಚಾಯತ್ ಎದುರು ಬಸ್ ನಿಂತಿದ್ದು, ಅನುಮಾನಗೊಂಡ ಗ್ರಾಮಸ್ಥರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ರಾತ್ರೋರಾತ್ರಿ ರೈತರ ಪ್ರವಾಸಕ್ಕೆ ಮೀಸಲಿಡಲಾದ ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಿಬ್ಬಂದಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರೋಪಿಸಿ ಗ್ರಾಮಸ್ಥರು ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಬಸ್ಸಿನಲ್ಲಿ ಕುಳಿತಿದ್ದ ಸದಸ್ಯರು ಬಸ್ಸಿಳಿದು ಮುಂದಕ್ಕೆ ನಡೆದು ಹೋದರು. ಇದನ್ನು ಗಮನಿಸಿದ ಪ್ರತಿಭಟನಾಕಾರರು ಬಸ್ಸನ್ನು ಮುಂದಕ್ಕೆ ಚಲಿಸಲು ಬಿಡಲಿಲ್ಲ. ಈ ಸಂದಭ ಮಾತನಾಡಿದ ಕೃಷಿಕ ಸಂತೋಷ್ ಶೆಟ್ಟಿ, ಗ್ರಾಮದ ಯಾವೊಬ್ಬ ಕೃಷಿಕನಿಗೂ ಮಾಹಿತಿ ನೀಡದೇ ಪಂಚಾಯತ್ ಸದಸ್ಯರು ತಮಗೆ ಬೇಕಾದವರ ಜೊತೆಗೆ ಪ್ರವಾಸ ಹೋಗುತ್ತಿರುವುದು ಸರ್ಕಾರದ ಹಣ ದುರ್ಬಳಕೆ ಮಾಡಿದಂತೆ ಎಂದು ಅರೋಪಿಸಿದರು. ಪ್ರವಾಸ ಹೋಗುವುದಿದ್ದರೆ ಗ್ರಾಮದ ಕೃಷಿಕರನ್ನು ಕರೆದೊಯ್ಯಲಿ. ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಜಲಾನಯನ ಅಧಿಕಾರಿ ರಘುರಾಮ ಶೆಟ್ಟಿ, ಪಂಚಾಯತ್ ಸಿದ್ದಪಡಿಸಿದ ಪಟ್ಟಿಯಂತೆ ಪ್ರವಾಸಕ್ಕೆ ಸಿದ್ಧತೆ ಮಾಡಲಾಗಿದೆ, ಹಕ್ಲಾಡಿ ಹಾಗೂ ಕರ್ಕುಂಜೆ ಗ್ರಾಮ ಪಂಚಾಯತ್ ಗಳಿಂದಲೂ ಇದೇ ರೀತಿಯ ಪ್ರವಾಸ ಜೊತೆಯಾಗಿ ಕೈಗೊಳ್ಳಲಾಗಿದೆ. ಬಸ್ ತಡೆದರೆ ಅವರಿಗೂ ಸಮಸ್ಯೆಯಾಗುತ್ತದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ ಪ್ರತಿಕ್ರಿಯಿಸಿ, ಪ್ರವಾಸಕ್ಕೂ ಗ್ರಾಮ ಪಂಚಾಯತ್ ಗೂ ಸಂಬಂದವಿಲ್ಲ ಎಂದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಾಕಾರರು ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸದೇ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಮಾಹಿತಿ ತಿಳಿದ ಕಂಡ್ಲೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾರರನ್ನು ಸಮಾಧಾನಿಸಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಜಲಾನಯನ ಅಧಿಕಾರಿ ರಘುರಾಮ ಶೆಟ್ಟಿ ಆಗಮಿಸಿದರು. ಆದರೂ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬರುವಂತೆ ಆಗ್ರಹಿಸಿದರು. ಬಳಿಕ ಕುಂದಾಪುರ ಎಸೈ ಸ್ಥಳಕ್ಕಾಗಮಿಸಿ ಬಸ್ ಚಾಲಕನಿಗೆ ವಾಪಾಸ್ಸು ಹೋಗುವಂತೆ ಸೂಚಿಸಿ, ಹಟ್ಟಿಯಂಗಡಿ ಪ್ರವಾಸ ರದ್ದುಗೊಳಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಪ್ರತಿಭನೆ ಸಂದರ್ಭ ಮುತ್ತ ಪೂಜಾರಿ, ಮಂಜುನಾಥ ಜಿ. ಗುಡ್ಡಿಯಂಗಡಿ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.