ಮಂಗಳೂರು, ಅ 25 (Daijiworld News/MSP): ಮಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ ನ ಸುರಕ್ಷತಾ ವ್ಯವಸ್ಥೆಯನ್ನು ಹೆಚ್ಚಳಗೊಳಿಸಿ ಮತ್ತಷ್ಟು ಬಿಗಿಗೊಳಿಸುವುದಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮುಂದಾಗಿದೆ.
ಸಮಾಂತರ ಟ್ಯಾಕ್ಸಿವೇಯ ಎರಡನೇ ಹಂತದ ಕೆಲಸ ಮತ್ತು ರನ್ ವೇ ಸೇಪ್ಟಿ ಬೇಸಿಕ್ ಸ್ಟ್ರಿಪ್ ಏರಿಯಾದ ವಿಸ್ತರಣೆ ಕೆಲಸಗಳಿಗೆ ಚಾಲನೆ ದೊರಕಿದೆ. 550 ಮೀಟರ್ ಉದ್ದದ ಸಮಾಂತರ ಟ್ಯಾಕ್ಸಿ ವೇಯ ಪ್ರಾಥಮಿಕ ಹಂತದ ಕೆಲಸ 2006ರ ಡಿಸೆಂಬರ್ ನಲ್ಲಿ ಪೂರ್ಣಗೊಂಡಿದ್ದು, 1350 ಮೀಟರ್ ಪ್ರಸ್ತುತ ನಡೆಯುತ್ತಿದೆ. ಇದರಿಂದಾಗಿ ಇಳಿದ ವಿಮಾನಗಳ ಹಾರುವಿಕೆ, ಇಳಿಯುವಿಕೆಯಲ್ಲಿನ ಸಮಯ ಉಳಿತಾಯವಾಗಲಿದೆ.
ರನ್ ವೇ ಬೇಸಿಕ್ ಸ್ಟ್ರಿಪ್ ಏರಿಯಾದ ಅಗಲ ಈಗ 75 ಮೀಟರ್ ಇರುವುದನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿದ್ದು ವಿಮಾನದ ಹೆಚ್ಚಿನ ಸುರಕ್ಷತೆ ಒದಗಲಿದೆ. ಸದ್ಯ ಮರವೂರು ಕಡೆಗಿನ 1500 ಮೀಟರ್ ಭಾಗದಲ್ಲಿ ಕೆಲಸ ಪ್ರಾರಂಭವಾಗಿದೆ.ಉಳಿದ 1000 ಮೀಟರ್ ಭಾಗದ ಕೆಲಸ ಜಿಲ್ಲಾಡಳಿತ ಭೂಮಿ ಸ್ವಾಧೀನ ಮಾಡಿದ ನಂತರ ನಡೆಯಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಸಿವಿಲ್ ಇಂಜಿಯನಿಂಗ್ ವಿಭಾಗದ ಅಧಿಕಾರಿ ರಾಜೀವ್ ಗುಪ್ತ ತಿಳಿಸಿದ್ದಾರೆ.