ಬೆಂಗಳೂರು ಜ 8 : ಮುಂಬೈರೂಫ್ ಟಾಪ್ ಪಬ್ ದುರಂತದ ಮರೆಯುವ ಮುನ್ನವೇ ಬೆಂಗಳೂರಿನಲ್ಲೂ ಭೀಕರ ಅಗ್ನಿ ದುರಂತ ಸಂಭವಿಸಿದೆ. ಜ 7ರ ಭಾನುವಾರ ತಡರಾತ್ರಿ ಸುಮಾರು 2.30ರ ವೇಳೆಗೆ ಈ ಘಟನೆ ನಡೆದಿದ್ದು, ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಐವರು ಕೆಲಸಗಾರರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಕೈಲಾಶ್ ಬಾರ್ ನಲ್ಲಿ ಈ ಅನಾಹುತ ಸಂಭವಿಸಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗುತ್ತಿದೆ.
ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಇಡೀ ಬಾರ್ ಗೆ ಬೆಂಕಿ ವ್ಯಾಪಿಸಿದ್ದು, ತಪ್ಪಿಸಿಕೊಳ್ಳಲಾಗದೇ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿ 3 ಗಂಟೆ ಹೊತ್ತಿಗೆ ಬೆಂಕಿ ನಂದಿಸಿ ಹತೋಟಿಗೆ ತಂದರೂ , ಅಷ್ಟು ಹೊತ್ತಿಗಾಗಲೇ ಆಗ್ನಿಯ ಜ್ವಾಲೆಗೆ ಐವರು ಕಾರ್ಮಿಕರು ಮೃತರಾಗಿದ್ದರು. ಇನ್ನು ಮೃತರನ್ನು ತುಮಕೂರಿನ ಗುಬ್ಬಿ ತಾಲೂಕಿನ ಮೂಲದ ಸ್ವಾಮಿ (23), ಪ್ರಸಾದ್ (20), ಮಹೇಶ್ (35), ಹಾಸನದ ಮಂಜುನಾಥ್ ( 45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ. ಕಟ್ಟಡದಲ್ಲಿ ಯಾವುದೇ ಎಮರ್ಜಿನ್ಸಿ ಎಕ್ಸಿಟ್ ಇಲ್ಲದಿರುವುದು ಐವರು ಸಜೀವ ದಹನವಾಗಲು ಪ್ರಮುಖ ಕಾರಣ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ. ಕೆ.ಆರ್ ಮಾರುಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.