ಕಾಸರಗೋಡು, ಅ 25 (Daijiworld News/MSP): ಅರಬ್ಬೀ ಸಮುದ್ರದಲ್ಲಿ ಉಂಟಾದ ಕ್ಯಾರ್ ಚಂಡಮಾರುತದ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಗಾಳಿ ಮಳೆ ಅಬ್ಬರಕ್ಕೆ ನಲುಗಿದೆ. ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ. ರಭಸದಿಂದ ಬೀಸುತ್ತಿರುವ ಗಾಳಿಯ ಪರಿಣಾಮ ಹಲವು ಮರಗಳು ನೆಲಕಚ್ಚಿದ್ದು, ಗಾಳಿಯ ಅಬ್ಬರಕ್ಕೆ ಅಪಾರ ನಾಶ - ನಷ್ಟ ಉಂಟಾಗಿದೆ. ಹಲವು ಮನೆ, ಕಟ್ಟಡಗಳ ಮೇಲೆ ಮರಗಳು ಉರುಳಿ ಬಿದ್ದಿವೆ.
ಕಾಸರಗೋಡು ಉಪಜಿಲ್ಲಾ ಕಲೋತ್ಸವದ ವೇದಿಕೆ ಮತ್ತು ಚಪ್ಪರ ನೆಲಕಚ್ಚಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ. ವಿದ್ಯಾರ್ಥಿಗಳು ಅಲ್ಲಿಂದ ಓಡಿದ ಕಾರಣ ಅಪಾಯ ತಪ್ಪಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊಳತ್ತೂರು ಶಾಲೆಯಲ್ಲಿ ಕಲೋತ್ಸವ ನಡೆಯುತ್ತಿದ್ದಾಗ ಘಟನೆ ನಡೆದಿದೆ. ಗಾಳಿ - ಮಳೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರು. ಕಲೋತ್ಸವ ಪೂರ್ವನಿರ್ಧಾರದಂತೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಈ ನಡುವೆ ಕೊಳತ್ತೂರಿನಲ್ಲಿ ಘಟನೆ ನಡೆದಿದೆ.
ಕಾಸರಗೋಡು - ಮಂಗಳೂರು ರಾಷ್ಟೀಯ ಹೆದ್ದಾರಿಯ ಕರಂದಕ್ಕಾಡ್ ನಲ್ಲಿ ಭಾರೀ ಗಾತ್ರದ ಮರವು ರಸ್ತೆಗೆ ಉರುಳಿದ್ದು , ಇದರಿಂದ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಮರ ಬಿದ್ದು ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮರವನ್ನು ತೆರವುಗೊಳಿಸಿದರು. ರಾವಣೇಶ್ವರ ಶಾಲಾ ಕಟ್ಟಡದ ಮೇಲೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ಇಂದು ರಜೆಯಾದುದರಿಂದ ಭಾರೀ ದುರಂತ ತಪ್ಪಿದೆ. ಮಧ್ಯಾಹ್ನ ಭಾರೀ ಮಳೆಗೆ ಮರ ಬಿದ್ದಿದ್ದು , ಶಾಲಾ ಕೊಠಡಿ ,ಸ್ಟಾಫ್ ರೂಂಗೆ ಹಾನಿ ಉಂಟಾಗಿದೆ. ಭಾರೀ ಗಾಳಿ ಮಳೆ ಹಿನ್ನಲೆಯಲ್ಲಿ ಇಂದು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ. ಉಪ್ಪಳ, ಕುಂಬಳೆ, ಕಾಸರಗೋಡು ತೀರದಲ್ಲಿ ಹಲವು ಮನೆಗಳು ಅಪಾಯದಲ್ಲಿದೆ.ಗಾಳಿ ಮಳೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.