ಮಂಗಳೂರು, ಅ.25(Daijiworld News/SS): ಸಂಯುಕ್ತ ಜನತಾದಳ ಪಕ್ಷ (ಜೆಡಿಯು) ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಜೆಡಿಯು ರಾಜ್ಯ ವಕ್ತಾರ ಚಂದ್ರಶೇಖರ ಸ್ಥಾವರಮಠ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ.12ರಂದು ರಾಜ್ಯದಲ್ಲಿ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಲಿದೆ. ಮನಪಾದ 60 ವಾರ್ಡ್ಗಳಲ್ಲಿ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬರುವ ಅಭ್ಯರ್ಥಿಗಳನ್ನು ಪರಿಗಣಿಸಿ ಸ್ಪರ್ಧೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಸಚ್ಛಾರಿತ್ರ್ಯವುಳ್ಳ ಜನಪರ ಕಾಳಜಿ ಹೊಂದಿರುವ ಪಕ್ಷದ ಕಾರ್ಯಕರ್ತರನ್ನು ಚುನಾವಣಾ ಕಣಕ್ಕೆ ಇಳಿಸಲಾಗುವುದು. ಆಸಕ್ತರು ಪಕ್ಷವನ್ನು ಸಂಪರ್ಕಿಸಬಹುದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಡಳಿತದಿಂದ ಜನ ನಿರಾಶರಾಗಿದ್ದಾರೆ. ಜನತೆ ಪರ್ಯಾಯ ರಾಜಕೀಯ ವ್ಯವಸ್ಥೆ ಅಪೇಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾಗಿದ್ದ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಜಾರ್ಜ್ ಫೆರ್ನಾಂಡಿಸ್, ಎಸ್.ಆರ್. ಬೊಮ್ಮಾಯಿ, ರಾಚಯ್ಯ, ನಜೀರ್ಸಾಬ್ ಮುಂತಾದವರು ಪಾರದರ್ಶಕ, ಜನಪರ, ಅಭಿವೃದ್ಧಿಪೂರಕ ಆಡಳಿತ ನೀಡಿದ್ದಾರೆ. ಇದೇ ಆಧಾರದಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಜೆಡಿಯು ಪಕ್ಷದ ಸಾಧನೆಗಳನ್ನು ಗಮನಿಸಿ ಜನತೆ ಪಕ್ಷವನ್ನು ಬೆಂಬಲಿಸಬೇಕೆಂದರು.