ಉಡುಪಿ, ಅ 25 (DaijiworldNews/SM): ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತಿದ್ದು, ಗಾಳಿ-ಮಳೆಯಿಂದಾಗಿ ಗುರುವಾರ ಸಂಜೆಯ ಬಳಿಕ ಇಬ್ಬರು ಬಲಿಯಾಗಿದ್ದಾರೆ.
ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾರುಗಿರಿಯ ಚಂದ್ರಶೇಖರ ಎಂಬವರ ಪತ್ನಿ ಸುಲೋಚನಾ(42) ನಿನ್ನೆ ಸಂಜೆ ವೇಳೆ ಶಂಖತೀರ್ಥ ಎಂಬಲ್ಲಿ ತುಂಬಿದ ತೋಡೊಂದನ್ನು ದಾಟುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗುರುವಾರ ಅಪರಾಹ್ನ 3:30ರ ಸುಮಾರಿಗೆ ಹುಲ್ಲು ತರಲೆಂದು ಗದ್ದೆಗೆ ತೆರಳಿದ್ದ ಅವರು 5:30ರ ತನಕ ಮನೆಗೆ ಹಿಂದಿರುಗದೇ ಇದ್ದಾಗ ಮನೆಯವರು ಹುಡುಕಾಡಿದಾಗ ರಾತ್ರಿ 8:00 ಗಂಟೆ ಸುಮಾರಿಗೆ ಸ್ವಲ್ಪವೇ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.
ಹುಲ್ಲು ಕೊಯ್ದು ಮನೆಗೆ ಹಿಂದಿರುಗುವ ಮಾರ್ಗದಲ್ಲಿ ತೋಡು ದಾಟುವಾಗ ಅವರು ಕಾಲು ಜಾರಿ ನೀರಿನಲ್ಲಿ ಮುಳುಗಿರಬೇಕೆಂದು ಶಂಕಿಸಲಾಗಿದೆ.
ಇದೇ ವೇಳೆ ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಸಾಂತಜೆಡ್ಡು ಎಂಬಲ್ಲಿ ರಾತ್ರಿ 9ಗಂಟೆಯ ಸುಮಾರಿಗೆ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು, ಆ ಮನೆಯಲ್ಲಿದ್ದ ಕುಕ್ಕೆಹಳ್ಳಿಯ ರಿಕ್ಷಾ ಚಾಲಕ ರವೀಂದ್ರ ಕುಲಾಲ್ (38) ಎಂಬವರು ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.
ರವೀಂದ್ರ ಕುಲಾಲ್ ಅವರು ಮನೆಗೆ ಹಿಂದಿರುಗುವ ವೇಳೆ ಧಾರಾಕಾರ ಮಳೆ ಸುರಿದುದರಿಂದ ಗಾಳಿ-ಮಳೆಗೆ ಮಾರ್ಗ ಸರಿಯಾಗಿ ಕಾಣಿಸದ ಕಾರಣ ರಿಕ್ಷಾವನ್ನು ನಿಲ್ಲಿಸಿ ಪರಿಚಯದ ದಿವಾಕರ ಶೆಟ್ಟಿ ಎಂಬವರ ಮನೆಯ ಸಿಟೌಟ್ನಲ್ಲಿ ನಿಂತಿದ್ದಾಗ ಪಕ್ಕದಲ್ಲಿದ್ದ ಮರವೊಂದು ಮನೆಯ ಮೇಲೆ ಉರುಳಿದೆ. ಆ ಸಂದರ್ಭ ಅದರ ಗೆಲ್ಲೊಂದು ರವೀಂದ್ರ ಅವರಿಗೆ ಬಡಿದು ಅದು ಮೃತ ಪಟ್ಟರೆಂದು ಕುಕ್ಕೆಹಳ್ಳಿಯ ಗ್ರಾಮ ಲೆಕ್ಕಿಗ ಗುರುಪ್ರಸಾದ್ ತಿಳಿಸಿದ್ದಾರೆ.
ರವೀಂದ್ರ ಕುಲಾಲ್ ಅವರು ಪತ್ನಿ ಹಾಗೂ ಮೂರು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಮರ ಬಿದ್ದು ದಿವಾಕರ ಶೆಟ್ಟಿ ಅವರ ಮನೆಗೆ 35,000ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದ.