ಉಡುಪಿ, ಅ 25 (DaijiworldNews/SM): ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ನಮ್ಮ ಎದುರಾಳಿ ಪಕ್ಷಗಳು ಸಂಪೂರ್ಣವಾಗಿ ಅಸ್ಥಿತ್ವ ಕಳೆದು ಕೊಂಡಿವೆ. ಅವರಲ್ಲೇ ಬಹಳಷ್ಟು ಒಳ ಜಗಳಗಳಿವೆ. ಅವರ ಕಾಲದ ಆಡಳಿತ ನೋಡಿದರೆ, ಜನರಿಗೆ ಸಾಧನೆ ಬಗ್ಗೆ ತಿಳಿಯುತ್ತದೆ. ಬರೀ ಸಮಾಜ ಒಡೆಯುವ ಕೆಲಸ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಾ, ರಚನಾತ್ಮಕ ವಿರೋಧ ಪಕ್ಷದವರಂತೆ ಕೆಲಸ ಮಾಡುವುದಕ್ಕಿಂತ ಬರಿ ಸುಳ್ಳು ಹೇಳಿಕೆ ಕೊಡುವುದರಲ್ಲಿ ತೊಡಗಿದ್ದಾರೆ. ಇನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಡುಗಡೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಅವರು ಇರೋ ಸರಕಾರವನ್ನು ಉಳಿಸಿಕೊಂಡಿಲ್ಲ. ಇಲಿ ಬಂದ್ರೆ ಹುಲಿ ಬಂತು ಅನ್ನಲಾಗುತ್ತದೆ. ಎಲ್ಲಿಯೂ ಸಲ್ಲದವರೂ ಈಗ ಉಪ ಚುನಾವಣೆಯಲ್ಲಿ ಸಲ್ಲುತ್ತಾರಾ? ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕು. ಭ್ರಷ್ಟಾಚಾರದಿಂದ ಜನ ಬೇಸತ್ತು ಕೊಂಡಿದ್ದಾರೆ ಎಂದರು.
ಬಿಜೆಪಿ ಸರಕಾರ ಬಂದ ಮೇಲೆ ಅನೇಕ ಹೊಸ ನೀತಿಯನ್ನು, ಪಾರದರ್ಶಕ ವ್ಯವಸ್ಥೆಯನ್ನು ಕೊಡುವುದಕ್ಕಾಗಿ ಈ ಸರಕಾರ ಹೊರಟಿದೆ. ಉತ್ತಮ ಆಡಳಿತ, ಸದೃಢ ಸಮಾಜ ಕಟ್ಟಲು ಬಿಜೆಪಿ ಸಿದ್ಧವಾಗಿದೆ ಎಂದರು. ಇಂದಿನ ಸರಕಾರ ಪ್ರವಾಹದ ಸಮಯದಲ್ಲಿ ಪ್ರತಿ ಮನೆಯನ್ನು ತಲುಪಿದ್ದಾರೆ ಎಂದರು.
ಕಾಂಗ್ರೆಸ್ ನ ಅನರ್ಹ ಶಾಸಕರುಗಳಿಗೆ ಟಿಕೆಟ್ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ ಅಶ್ವತ್, 'ಕೆಟ್ಟ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಮುಖ್ಯ ಕಾರಣರಾದವರು. ಸಮಾಜದ ರಕ್ಷಣೆ ಮಾಡಿದವರು. ಸಮಾಜಕ್ಕೆ ದೊಡ್ಡ ವ್ಯತ್ಯಾಸ ಮಾಡಿದವರು. ಸತ್ಕಾರ್ಯವನ್ನು ಮಾಡಿದ ಅವರಿಗೆ ಮಾನ್ಯತೆ ಕೊಡಲೇಬೇಕು . ಅನರ್ಹರು ಇನ್ನೂ ಕೂಡ ಪಕ್ಷ ಸೇರಿಲ್ಲ ಮುಂದೆ ಅದರ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗ ಸದ್ಯಕ್ಕೆ ಆ ವಿಷಯ ಕೋರ್ಟ್ ನಲ್ಲಿರುವುದರಿಂದ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.