ಬಂಟ್ವಾಳ, ಅ 25 (DaijiworldNews/SM): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಕರಾವಳಿ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಸುರಿದ ಭಾರೀ ಗಾಳಿ, ಮಳೆಗೆ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸಜಿಪಮೂಡ ಗ್ರಾಮದ ನಿವಾಸಿಗಳಾದ ಭಾತಿಶ್, ಅಲಿಯಬ್ಬ, ಅವ್ವಮ್ಮ ಎಂಬವರಿಗೆ ಸೇರಿದ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇಡ್ಕಿದು ಗ್ರಾಮದ ಸುರೇಶ್ ಅಮೀನ್, ಸಂಕಪ್ಪ ಗೌಡ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ, ಸಾಲೆತ್ತೂರು ಗ್ರಾಮದ ನಿವಾಸಿಗಳಾದ ಆನಂದ ಪೂಜಾರಿ, ಸುಂದರ ಪೂಜಾರಿ ಅವರ ಮನೆಗಳಿಗೆ ಭಾಗಶಃ ಹಾನಿಯಾದರೆ, ಇಲ್ಲಿನ ಅಬ್ದುಲ್ ಖಾದರ್ ಅವರ ಮನೆಗೆ ಹೆಚ್ಚಿನಹಾನಿಯಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಬಾಬು ಪುರುಷ, ಕೊಳ್ನಾಡು ಗ್ರಾಮದ ವಸಂತ ಅವರ ಮನೆಗಳಿಗೆ ಭಾಗಶಃ ಹಾನಿ, ಅಳಿಕೆ ಗ್ರಾಮದ ಶಶಿಧರ, ಅಜ್ಜಿಬೆಟ್ಟುವಿನ ಶ್ರೀಯಾಳ ಎಂಬವರಿಗೆ ಸೇರಿದ ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯ ವರದಿ ತಿಳಿಸಿದೆ. ವಿಟ್ಲ ಕಸಬಾ ಗ್ರಾಮದ ಕಡಂಬು ನಿವಾಸಿ ಜಯಂತ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದ ಬಗ್ಗೆಯೂ ವರದಿಯಾಗಿದೆ.
ತಾಲೂಕಿನ ಹಲವೆಡೆ ಮಳೆಯಿಂದ ಒಂದಿಷ್ಟು ಹಾನಿಯಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಂಡಿದ್ದಾರೆ.