ಮೂಡುಬಿದಿರೆ, ಜ 8 : ಮೂಡುಬಿದಿರೆ ತಾಲೂಕು ಜನವರಿ ತಿಂಗಳಿನಿಂದಲೇ ಅಸಿತ್ವಕ್ಕೆ ಬರಲಿದೆ. ಇಲ್ಲಿನ ಬಹುಬೇಡಿಕೆ ಒಳಚರಂಡಿ ಯೋಜನೆಗೆ ಈ ತಿಂಗಳನಲ್ಲಿ ಬಜೆಟ್ನಲ್ಲಿ ಅನುದಾನ ಇಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಒಟ್ಟು 79.50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮವನ್ನು ಶಿಲಾ ಫಲಕಗಳನ್ನು ಅನಾವರಣಗೊಳಿಸುವುದರ ಮೂಲಕ ನೆರವೇರಿಸಿ ಸ್ವರಾಜ್ಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೋಮುವಾದ ನಿಗ್ರಹಕ್ಕೆ ಕಠಿಣ ಕಾನೂನು ತರುತ್ತೇವೆ. ಎಲ್ಲರನ್ನು ಸಮಾನತೆಯಿಂದ ಕಾಣುತ್ತೇವೆ. ಭಯಬೇಡ. ದಕ್ಷಿಣ ಕನ್ನಡ ಜಿಲ್ಲೆಯವರು ಸುಶಿಕ್ಷಿತರು, ಕೋಮುವಾದ ಬೆಳೆಯಲು ಅವಕಾಶ ಮಾಡಿಕೊಡಬೇಡಿ. ದಕ್ಷಿಣ ಕನ್ನಡವು ಶಾಂತಿ ವ್ಯವಸ್ಥೆಯಿಂದ ಇರಲು ನಾಗರಿಕರ ಸಹಕಾರವು ಅಗತ್ಯ ಎಂದರು.
ಆರುವರೆ ಕೋಟಿಯಲ್ಲಿ ಶೇ.90 ಸರ್ಕಾರದಿಂದ ಸವಲತ್ತು ಪಡೆದ ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನತೆಯ ವಿರೋಧವಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಖರಿಯು ಬಿಜೆಪಿಗೂ ಗೊತ್ತು. ಆದರೆ ಜನರಲ್ಲಿ ಗೊಂದಲ ಸೃಷ್ಟಿಸಲು ಸರ್ಕಾರವನ್ನು ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಿದೆ. ಪರಿವರ್ತನೆ ರ್ಯಾಲಿಯಲ್ಲಿ ಯಡ್ಡಿಯೂರಪ್ಪ ಪುಂಗಿ ಊದಿದ್ದೇ ಬಂತು. ಎರಡು ನಾಲಗೆ ಇರುವ ಬಿಜೆಪಿಗೆ ಸುಳ್ಳೇ ಮನೆ ದೇವರು. ಸೈಕಲ್, ಸೀರೆ ಕೊಟ್ಟದ್ದು ಮಾತ್ರ ಬಿಜೆಪಿ ಸಾಧನೆ. ಜ್ಯಾತ್ಯತೀತೆಯಲ್ಲಿ ನಂಭಿಕೆಯಿಲ್ಲದ ಬಿಜೆಪಿಯವರು ಸಂವಿಧಾನ ಬದಲಾಯಿಸುವ ಹಿಡನ್ ಅಜೆಂಡಾ ಹೊಂದಿದ್ದಾರೆ. ರಾಜ್ಯದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಬಿಜೆಪಿ ರಾಜ್ಯ ನಾಯಕರ ಮೇಲೆ ನಂಬಿಕೆ ಇಲ್ಲ. ಅವರು ಮೋದಿ ವರ್ಚಸ್ಸಿನಲ್ಲಿ ಮಿಷನ್ ೧೫೦ ದೃಷ್ಟಿ ಇರಿಸಿದ್ದಾರೆ. ರಾಜ್ಯದಲ್ಲಿ ಮನ್ ಕೀ ಬಾತ್ ನಡೆಯುವುದಿಲ್ಲ, ಇಲ್ಲಿ ಏನಿದ್ದರೂ ಕಾಮ್ ಕೀ ಬಾತ್ ಮಾತ್ರ ನಡೆಯುತ್ತದೆ ಎಂದರು.
ರಾಜ್ಯ ಸರ್ಕಾರದ ಸಾಧನೆಯ ಸಂಭ್ರಮದ ‘ನುಡಿದಂತೆ ನಡೆದಿದ್ದೇವೆ’ ಕೃತಿಯನ್ನು ಬಿಡುಗಡೆ ಮಾಡಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ೩೭ ಮಂದಿ ಫಲಾನುಭವಿಗಳಿಗೆ ಮುಖ್ಯಮಂತ್ರಿಯವರು ಸಾಂಕೇತಿಕವಾಗಿ ಸವಲತ್ತುಗಳು, ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಬಿಜೆಪಿಯಲ್ಲಿರುವ ಅನಂತ್ ಕುಮಾರ್ ಹೆಗ್ಡೆಯಂತವರು ಕೋಮುವಾದದ ವಿಷ ಬೀಜ ಬಿತ್ತುತಿದ್ದಾರೆ. ಅನಂತ್ ಕುಮಾರ್ ಹೆಗ್ಡೆ ಎಂಪಿ ಆಗುವುದಲ್ಲ, ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹನಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಮತೀಯ ಶಕ್ತಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಕೋಮು ಸಾಮರಸ್ಯವನ್ನು ಹಾಳು ಮಾಡುವವರಿಗೆ ಜಿಲ್ಲೆಯ ಜನತೆ ಮಣೆ ಹಾಕಬಾರದು ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕ್ಷೇತ್ರ ಶಾಸಕ ಕೆ. ಅಭಯಚಂದ್ರ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಅಧಿಕಾರ ಪಡೆದ ಒಂದು ಗಂಟೆಯಲ್ಲೇ ಹಸಿವು ಮುಕ್ತ ಕರ್ನಾಟಕದ ಸಂಕಲ್ಪವನ್ನು ಮಾಡಿದವರು ಸಿದ್ದರಾಮಯ್ಯನವರು. ವಿವಿಧ ಯೋಜನೆಗಳಿಗೆ ಅನುದಾನ ಒದಗಿಸುವುದರ ಮೂಲಕ ಮೂಡುಬಿದಿರೆಗೆ ಅಭಿವೃದ್ಧಿ ಭಾಗ್ಯವನ್ನು ಒದಗಿಸಿದ್ದಾರೆ. ವಿದ್ಯಾಸಿರಿಯ ಅತೀ ಹೆಚ್ಚಿನ ಅನುದಾನ ಮೂವತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗಿರುವ ಮೂಡುಬಿದಿಗೆ ಸಿಕ್ಕಿದೆ ಎಂದರು.
ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಚಿವರಾದ ಯು.ಟಿ ಖಾದರ್, ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಮೊಯ್ದಿನ್ ಬಾವ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಬಿ.ಎಚ್ ಖಾದರ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಮಂಗಳೂರು, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು , ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ, ಮಿಜಾರುಗುತ್ತು ಆನಂದ ಆಳ್ವ, ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಉಪಸ್ಥಿತರಿದ್ದರು.
.jpg)
.jpg)
.jpg)
.jpg)
.jpg)
.jpg)
.jpg)
.jpg)
ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ರಾಮಚಂದ್ರ ರಾವ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಮೂಡುಬಿದಿರೆಗೆ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅಧಿಕೃತ ಭೇಟಿ ನೀಡಿದ ಸಿದ್ಧರಾಮಯ್ಯ ಅವರನ್ನು ಶಾಸಕರಾಗಿ 25 ವರ್ಷಗಳನ್ನು ಪೂರೈಸಿ ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿರುವ ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಸಮ್ಮಾನಿಸಿದರು.