ಮಂಗಳೂರು, ಅ 26 (Daijiworld News/MSP): ತಾನು ವಾಸವಾಗಿದ್ದ ಅಪಾರ್ಟ್ಮೆಂಟಿನ ಬಾಡಿಗೆ ಪ್ಲ್ಯಾಟ್ ನಲ್ಲಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನಲ್ಲಿ ಅ.25 ರ ಶುಕ್ರವಾರ ತಡರಾತ್ರಿ ನಡೆದಿದೆ.
ವಿದ್ಯಾರ್ಥಿನಿಯನ್ನು ಕೇರಳ ಮೂಲದ ಅನುಪಮಾ (23) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಸುಮಾರು 11 ಗಂಟೆಗೆ ಶ್ರೀ ದೇವಿ ಅಪಾರ್ಟ್ಮೆಂಟಿನ ಪ್ಲ್ಯಾಟಿನಲ್ಲಿ ಪ್ಯಾನಿಗೆ ನೇಣುಹಾಕಿದ ಸ್ಥಿತಿಯಲ್ಲಿ ಆಕೆ ಮೃತದೇಹ ಪತ್ತೆಯಾಗಿತ್ತು. ಅನುಪಮಾ ತಾಯಿ ವಿದೇಶದಲ್ಲಿದ್ದು, ಈಕೆ ಕಂಕನಾಡಿ ಬಳಿ ಇರುವ ಕಾಲೇಜೊಂದರಲ್ಲಿ ನರ್ಸಿಂಗ್ ಕಲಿಯುತ್ತಿದ್ದಳು. ಈಕೆ ಈ ಅಪಾರ್ಟ್ಮೆಂಟಿನಲ್ಲಿ ಕಳೆದ ಒಂದು ವರ್ಷದಿಂದ ವಾಸ್ತವ್ಯ ಹೂಡಿದ್ದಳು ಎನ್ನಲಾಗಿದೆ. ಸ್ಥಳಕ್ಕೆ ಪಾಂಡೇಶ್ವರ ದಕ್ಷಿಣ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.
ಪ್ರೇಮ ವೈಫಲ್ಯ ಕಾರಣ?
ಚೆನೈನಲ್ಲಿ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಅಲೆನ್ ಹಾಗೂ ಅನುಪಮಾ ಪರಸ್ಪರ ಪ್ರೀತಿಸುತ್ತಿದ್ದು ಇತ್ತೀಚೆಗೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿತ್ತು, ಆಕೆಗೆ ಅಪಾರ್ಟ್ಮೆಂಟ್ ನ್ನು ಬಾಡಿಗೆಗೆ ಆತನೇ ಮಾಡಿ ಕೊಟ್ಟಿದ್ದ ಎನ್ನಲಾಗಿದೆ. ಅನುಪಮಾ ಮದುವೆಯ ಬೇಡಿಕೆಯನ್ನು ಅಲೆನ್ ನಿರಾಕರಿಸಿದ್ದ ಎನ್ನಲಾಗಿದೆ. ಆಕೆಯ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.