ಬೆಂಗಳೂರು ಜ 08 : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅವರು ಕರ್ನಾಟಕಕ್ಕೆ ಜ 7 ರ ಭಾನುವಾರ ಭೇಟಿ ನೀಡಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಯೋಗಿ ಆದಿತ್ಯಾನಾಥ್ ಅವರ ಕಾಲೆಳಿದ್ದಾರೆ.ಆದರೆ ಇದಕ್ಕೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಸಿಎಂ ಯೋಗಿ ಆದಿತ್ಯಾನಾಥ್ ಪ್ರತಿಯಾಗಿ ಟ್ವೀಟ್ ಮಾಡುವ ಮೂಲಕ ಅದೇ ರೀತಿಯಲ್ಲಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಜ 7 ರ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿದ್ದರು ಅಲ್ಲದೆ ಸಿಎಂ ಯೋಗಿಯವರೇ ನೀವು ನಮ್ಮಿಂದ ಕಲಿಯಬೇಕಾದ್ದು ಬಹಳಷ್ಟಿದೆ. ನೀವು ಖಂಡಿತವಾಗಿಯೂ ಒಮ್ಮೆ ಇಂದಿರಾ ಕ್ಯಾಂಟೀನ್ ಹಾಗೂ ಕಿರಾಣಿ ಅಂಗಡಿಗಳಿಗೆ ಭೇಟಿ ಕೊಡುವಂತೆಯೂ ಅಹ್ವಾನಿಸಿದ್ದರು. ಇದು ನಿಮ್ಮ ರಾಜ್ಯದಲ್ಲಿ ಆಗಾಗ್ಗೆ ನಡೆಯುವ ಹಸಿವಿನಿಂದ ಸಾವನ್ನಪ್ಪುವರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂದಿದ್ದರು. ಇದಕ್ಕೆ ಸುಮಾರು ಒಂದು ತಾಸಿನ ನಂತರ ಪ್ರತಿಕ್ರಿಯಿಸಿದ ಸಿಎಂ ಆದಿತ್ಯಾನಾಥ್ ಅವರು, ನನ್ನನ್ನು ಕರ್ನಾಟಕಕ್ಕೆ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಸಿದ್ದರಾಮಯ್ಯನವರೇ. ಸಾಕಷ್ಟು ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಳಿದ್ದೇನೆ. ನಿಮ್ಮ ಭಾಗದಲ್ಲಿಯೇ ಅತಿ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ಕೂಡ ಕೇಳಿದ್ದೇನೆ. ಹಲವಾರು ಪ್ರಾಮಾಣಿಕ ಅಧಿಕಾರಿಗಳ ಸಾವು ಹಾಗೂ ವರ್ಗಾವಣೆ ಪ್ರಸ್ತಾಪಿಸುತ್ತಿಲ್ಲ. ಉತ್ತರ ಪ್ರದೇಶ ಸಿಎಂ ಆಗಿ ನಿಮ್ಮ ಪಕ್ಷದ ಕಷ್ಟಕರ ಹಾಗೂ ಕಾನೂನು ರಹಿತ ವ್ಯವಸ್ಥೆಯನ್ನು ತೊಡೆದುಹಾಕಲು ನಾನು ಪ್ರಯತ್ನಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಬಂದಿದ್ದೇ ತಡ, ಹಿಂದು ದ್ವೇಷ ಕಾರುತ್ತಿದ್ದ ಸಿಎಂ ಧಾರ್ಮಿಕತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇನ್ನೆರಡು ಬಾರಿ ಯೋಗಿ ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯನವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೂ ಆಶ್ಚರ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸುಮ್ಮನಾಗದ ಸಿಎಂ ಸಿದ್ದರಾಮಯ್ಯ, ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು' ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್' ಮುಂದೆ ಯಾರಿಗೆ ಜೈ?’ ಎಂದು ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ. ಹೀಗೆ ಟ್ವೀಟರ್ ನಲ್ಲಿ ಎರಡು ಪಕ್ಷಗಳ ನಡುವೆ , ವಾದ ಪ್ರತಿವಾದ ಲೇವಡಿಗಳು ಮುಂದುವರಿಯುತ್ತಾ ಹೋಗಿದೆ.