ವಿಟ್ಲ, ಅ 26 (Daijiworld News/MSP): ಅಲ್ಲಿ ಸಂಭ್ರಮವಿತ್ತು, ಪ್ರೀತಿ, ಆತ್ಮೀಯತೆಯ ಭಾವವಿತ್ತು, ಸ್ನೇಹಿತರ ಒಡನಾಟವಿತ್ತು, ಧರ್ಮಗುರುಗಳ ಆಶೀರ್ವಚನವೂ ಇತ್ತು.. ಹೌದು..ಇವೆಲ್ಲದರ ಸಮ್ಮಿಲನದೊಂದಿಗೆ ಮೂಡಿ ಬಂದ "ಸಮುದಾಯದ ದಿನ" ಕಾರ್ಯಕ್ರಮವು ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೇರಿಸಿತ್ತು.
ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಇತ್ತೀಚೆಗೆ ಬೊರಿಮಾರ್ ಸಂತ ಜೋಸೆಫರ ಚರ್ಚ್ ನಲ್ಲಿ ಸಮುದಾಯದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ| ಎಲೋಶಿಯಸ್ ಪಾವ್ಲ್ ಡಿಸೋಜ ಭೇಟಿ ನೀಡಿ ಸಮುದಾಯದ ದಿನ ಆಚರಣೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಪರಸ್ಪರ ಪ್ರೀತಿ, ವಿಶ್ವಾಸ, ತ್ಯಾಗಮಯ ಜೀವನವನ್ನು ನಡೆಸುವ ಸಂತ ಜೋಸೆಫರಿಗೆ ಸಮರ್ಪಿತ ದೇವಾಲಯ ಬೊರಿಮಾರ್ ಧರ್ಮ ಕೇಂದ್ರದ ಎಲ್ಲಾ ಕ್ರೈಸ್ತ ಪ್ರಜೆಗಳನ್ನು ಅವರು ಅಬಿನಂದಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೊಗರ್ನಾಡ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ದೀಪಕ್ ಲೀಯೊ ಡೇಸಾ ರವರು ಮಾತನಾಡಿ, ಬೊರಿಮಾರ್ ಧರ್ಮ ಕೇಂದ್ರ ಅತೀ ಸಣ್ಣದಾದರೂ ಶತಮಾನೋತ್ತರ ಬೆಳ್ಳಿ ಹಬ್ಬದ ಅಂಗವಾಗಿ ವರ್ಷವಿಡೀ ಆಚರಿಸಿದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.
ಧರ್ಮ ಕೇಂದ್ರದ ಎಲ್ಲಾ ಭಕ್ತಾದಿಗಳಿಗೆ ಶತಮಾನೋತ್ತರ ಬೆಳ್ಳಿ ಹಬ್ಬದ ಸವಿ ನೆನಪಿಗೆ ನೆನಪಿನ ಕಾಣಿಕೆ ಹಾಗೂ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಈ ಮೊದಲು ಸೇವೆ ಸಲ್ಲಿಸಿದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಯವರಿಗೆ ಸನ್ಮಾನಿಸಲಾಯಿತು. ನಿವೃತ್ತ ಬಿಷಪ್ ಅತೀ ವಂದನೀಯ ಡಾ| ಎಲೋಶಿಯಸ್ ಪಾವ್ಲ್ ಡಿಸೋಜ ಮತ್ತು ಫಾದರ್ ದೀಪಕ್ ಡೇಸಾ ರವರಿಗೆ ಫಲ ಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಚರ್ಚ್ ನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ವಂದಿಸಿದರು. ರೀಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೀತಿ ಪಿರೇರಾ ಮತ್ತು ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು.