ಕುಂದಾಪುರ, ಅ 26 (Daijiworld News/MSP): ರಸ್ತೆ ಸುರಕ್ಷತೆಗೆಂದು ನಿಯೋಜನೆಗೊಂಡ ಹೈವೇ ಪೆಟ್ರೋಲ್ ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬೈಕೊಂದನ್ನು ತಡೆದು, ಸವಾರ ನಿಲ್ಲಿಸದಿದ್ದಾಗ ಒವರ್ಟೇಕ್ ಮಾಡಿ ಅಡ್ಡಗಟ್ಟಿದ ಪರಿಣಾಮ ಬೈಕ್ ರಸ್ತೆಗುರುಳಿ ಬೈಕ್ ಸವಾರ ಹಾಗೂ ತಡೆಯಲು ಹೋದ ಪೊಲಿಸ್ಗೆ ಗಾಯಗಳಾದ ಸಿನಿಮೀಯ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ರಾಘವೇಂದ್ರ ಮಠದ ಮುಂಭಾಗದಲ್ಲಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಕೊರವಡಿ ನಿವಾಸಿ ಉಲ್ಲಾಸ್(27) ಎಂದು ಗುರುತಿಸಲಾಗಿದ್ದು, ಕೋಟೆಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಶಂಕರನಾರಾಯಣ ಠಾಣೆಯ ಎಎಸೈ ಪ್ರಭಾಕರ ಎಂದು ತಿಳಿದು ಬಂದಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈವೇ ಪೆಟ್ರೋಲ್ ಅಧಿಕಾರಿಗಳ ವಾಹನದಲ್ಲಿದ್ದ ಪ್ರಭಾಕರ್ ಹೆಲ್ಮೆಟ್ ಧರಿಸದೇ ಬಂದಿದ್ದನೆನ್ನಲಾದ ಬೈಕ್ ಸವಾರ ಉಲ್ಲಾಸ್ನನ್ನು ಕಂಡು ಬೈಕ್ ನಿಲ್ಲಿಸುವಂತೆ ಸೂಚಿಸಿದಾಗ ಆತ ನಿಲ್ಲಿಸದೇ ಮುಂದಕ್ಕೆ ಚಲಿಸಲು ಯತ್ನಿಸಿದಾಗ ಎಎಸೈ ಪ್ರಭಾಕರ ಬೈಕ್ನ ಹ್ಯಾಂಡಲ್ ಹಿಡಿದು ಎಳೆದಿದ್ದಾರೆ. ಆಗ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಬೈಕ್ ಸವಾರ ಉಲ್ಲಾಸ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಉಲ್ಲಾಸ್ ತೆಕ್ಕಟ್ಟೆಯಿಂದ ಕೊರವಡಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು
ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ದಿಢೀರ್ ನಡೆದ ಅವಘಡದಿಂದ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರ ದೌರ್ಜನ್ಯ ಖಂಡನೀಯ ಎಂದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪ್ರತಿಭಟನೆ ನಡೆಸಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಆಗ್ರಹಿಸಿದರು. ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಉಡುಪಿ ಡಿವೈಎಸ್ಪಿ ಜೈಶಂಕರ್ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರು ಇತ್ತೀಚೆಗೆ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಚಲಿಸುತ್ತಿದ್ದ ಬೈಕ್ನ ಹ್ಯಾಂಡಲ್ ಹಿಡಿದು ದಂಡ ವಸೂಲಿ ಮಾಡುವ ಅಧಿಕಾರ ಪೊಲೀಸರಿಗೆ ಕೊಟ್ಟವರ್ಯಾರು ಎಂದು ಆಕ್ರೋಶ ಹೊರಹಾಕಿದರು.
ಹೈವೇ ಪೆಟ್ರೋಲಿಂಗ್ ಮಾಡುತ್ತಿದ್ದ ಶಂಕರನಾರಾಯಣ ಎಎಸೈ ಪ್ರಭಾಕರ ಹಾಗೂ ಸಿಬ್ಬಂದಿಗಳು ಹೆಲ್ಮೆಟ್ ಧರಿಸದ ಬೈಕ್ ಸವಾರನನ್ನು ನಿಲ್ಲಿಸುವಂತೆ ಕೈ ಅಡ್ಡ ಹಿಡಿದಿದ್ದಾರೆ ಆಗ ಮುಂದಕ್ಕೆ ಚಲಿಸಲು ಯತ್ನಿಸಿದ ಉಲ್ಲಾಸ್ ಬೈಕ್ ಪ್ರಭಾಕರ ಅವರ ಕೈಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಉಲ್ಲಾಸ್ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಗಾಯಗಳಾಗಿವೆ. ಕೈಗೆ ಢಿಕ್ಕಿಯಾದ ಪರಿಣಾಮ ಎಎಸೈ ಪ್ರಭಾಕರ ಅವರ ಕೈಗೆ ಗಂಭೀರ ಗಾಯಗಳಾಗಿವೆ. ಎಎಸೈ ಪ್ರಭಾಕರ ಅವರ ಕೈಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.