ಕಾರವಾರ, ಅ.26(Daijiworld News/SS): ಕರ್ನಾಟಕದ ಕಾರವಾರ ಮತ್ತು ಗೋವಾದ ಗಡಿಯಲ್ಲಿ ತುಫಾನಿಗೆ ಸಿಲುಕಿ ಹೊರಬರಲು ಶ್ರಮಿಸುತ್ತಿದ್ದ ಮಲ್ಪೆಯ ರಾಜ್ ಕಿರಣ್ ಮತ್ತು ಮಂಗಳೂರಿನ ಮಹೇಲಿ ಬೋಟ್'ನಲ್ಲಿ ಇದ್ದ 18 ಮೀನುಗಾರರ ರಕ್ಷಣೆ ಮಾಡಲಾಗಿದೆ.
ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಾರವಾರ ಜಿಲ್ಲಾಧಿಕಾರಿಯವರಿಗೆ ತುರ್ತು ಸೂಚನೆ ನೀಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ವಿಜಯ ಭಾಸ್ಕರ್ ಅವರ ಮೂಲಕ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ, ಕರ್ನಾಟಕದ ಮೀನುಗಾರರಿಗೆ ನಿಯಮದ ಹೆಸರಿನಲ್ಲಿ ಕಿರುಕುಳವಾಗದಂತೆ ಮತ್ತು ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ, ಅಗತ್ಯವಿದ್ದರೆ ಹೆಲಿಕಾಪ್ಟರ್ ಸೇವೆ ಬಳಸಿಕೊಳ್ಳಲು ಸೂಚಿಸಿದ್ದರು.
ಇದೀಗ ಎರಡು ಬೋಟ್'ನಲ್ಲಿ ಇದ್ದ ಎಲ್ಲಾ 18 ಮೀನುಗಾರರನ್ನು ರಕ್ಷಿಸಿ ಮಂಗಳೂರು ಮತ್ತು ಮಲ್ಪೆಗೆ ಕರೆತರಲಾಗುತ್ತಿದೆ. ನಿನ್ನೆಯಿಂದ ನಿರಂತರವಾಗಿ ಕಾರವಾರ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸಂಪರ್ಕದಲ್ಲಿದ್ದು, ಮೀನುಗಾರರ ರಕ್ಷಣೆಗೆ ತಕ್ಷಣ ಸ್ಪಂದಿಸಿದ ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.