ಮಂಗಳೂರು, ಅ.26(Daijiworld News/SS): ಅಣ್ಣನೇ ತಂಗಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಧಾರುಣ ಘಟನೆ ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಪ್ರಫಿಯೋನಾ ಸ್ವೀಡಲ್ ಕಟಿನೊ (16) ಎಂದು ಗುರುತಿಸಲಾಗಿದೆ. ಸ್ಯಾಮ್ಸನ್ ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿ ಸ್ಯಾಮ್ಸನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ಷುಲ್ಲಕ ಕಾರಣಕ್ಕೆ ಹುಡುಗಿಯ ತಲೆಗೆ ಸುತ್ತಿಗೆಯಿಂದ ಹೊಡೆದು (ಅ.8) ಕೊಲೆ ಮಾಡಿದ್ದಾನೆ. ಬಳಿಕ ಹುಡುಗಿಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಎಸೆದಿರುತ್ತಾನೆ. ಮೃತಳ ತಂದೆ ತಾಯಿ ಮಗಳ ಬಗ್ಗೆ ಈತನಲ್ಲಿ ವಿಚಾರಿಸಿದಾಗ ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾಳೆ ಎಂದು ತಿಳಿಸಿರುತ್ತಾನೆ.
ಆದರೆ ಮಗಳು ಬಾರದೇ ಇದ್ದುದನ್ನು ಗಮನಿಸಿದ ಪೋಷಕರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಡುಗಿ ಅಪ್ರಾಪ್ತೆಯಾಗಿದ್ದರಿಂದ, ಯಾರೋ ಪುಸಲಾಯಿಸಿ, ಅಪಹರಿಸಿರಬಹುದು ಎಂದು ತಂದೆ-ತಾಯಿ ಸಂಶಯಿಸಿದ್ದರು. ಆದರೆ ಆರೋಪಿಯನ್ನು ಕೂಲಂಕಷವಾಗಿ ವಿಚಾರಿಸಿದಾಗ ಅಣ್ಣನೇ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.