ಉಳ್ಳಾಲ ಜ 08 : ಮಸೀದಿ ಟ್ಯೂಬ್ಲೈಟ್ , ಮನೆಯೊಂದರ ಲೈಟ್ ಮತ್ತು ಮಾಂಸದ ಅಂಗಡಿಗೆ ಹಾನಿಗೈದು ಗಲಭೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ನಡೆದಿದ್ದು, ಸಿಸಿಟಿವಿಯಲ್ಲಿ ಸರೆಸಿಕ್ಕ ದೃಶ್ಯದ ಆಧಾರದಲ್ಲಿ ಸುಳ್ಯ ಮೂಲದ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನಾಟೆಕಲ್ ಜಂಕ್ಷನ್ನಲ್ಲಿರುವ ಮಸೀದಿಯಲ್ಲಿ ಘಟನೆ ನಡೆದಿದೆ. ತಡರಾತ್ರಿ ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಸೀದಿಯೊಳಗಡೆ ನುಗ್ಗಿ ಹೊರಹಾಕಿದ್ದ ಟ್ಯೂಬ್ ಲೈಟ್ ಧ್ವಂಸಗೈದು ಮತ್ತೆ ಒಳನುಗ್ಗಿ ಅಲ್ಲಿ ಹಾಕಲಾಗಿದ್ದ ಟ್ಯೂಬ್ಲೈಟನ್ನು ಹುಡಿಗೈದು ಪರಾರಿಯಾಗಿದ್ದಾರೆ. ಅಲ್ಲದೆ ಸ್ಥಳದಲ್ಲೇ ಇದ್ದ ಮನೆಯೊಂದರ ಲೈಟ್ ನ್ನೂ ಪುಡಿಗೈದ ದುಷ್ಕರ್ಮಿಗಳು ಅಲ್ಲಿ ಸಮೀಪವೇ ಇದ್ದ ಮಾಂಸದ ಅಂಗಡಿಗೆ ಅಳವಡಿಸಲಾಗಿದ್ದ ಟೈಲ್ಸ್ ಅನ್ನೂ ಮುರಿದು ಹಾಕಿದ್ದಾರೆ. ಘಟನೆ ನಂತರ ಜಂಕ್ಷನ್ನಿನಲ್ಲಿ ಅಂಗಡಿಯೊಂದಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಮುರಿದು ಬೈಕಿನಲ್ಲಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಮಸೀದಿಗೆ ನಮಾಜಿಗೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅಂಗಡಿಯಲ್ಲಿ ಇದ್ದ ಸಿಸಿಟಿವಿಯ ಹಾಡ್ ಡಿಸ್ಕನ್ನು ಪರಿಶೀಲಿಸಿದಾಗ ಇಬ್ಬರ ಕೈವಾಡ ಬೆಳಕಿಗೆ ಬಂದಿದೆ. ಸುಳ್ಯ ಮೂಲದ ಇಬ್ಬರು ದೇರಳಕಟ್ಟೆಯ ವಾಟರ್ ಸಪ್ಲೈನಲ್ಲಿ ಕೆಲಸ ಮಾಡುವವರು ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಅದರಂತೆ ಕೊಣಾಜೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನ ಜಮಾಯಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಗಲಭೆಗೆ ಪ್ರಚೋದನೆ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಾಟೆಕಲ್ ವ್ಯಾಪ್ತಿಯಲ್ಲಿ ಈವರೆಗೂ ಸೌಹಾರ್ದತೆಯನ್ನು ಕೆಡಿಸುವ ಕಾರ್ಯ ಆಗಿರಲಿಲ್ಲ. ಇದೀಗ ದುಷ್ಕೃತ್ಯ ನಡೆಸಲಾಗಿದೆ. ಬಂಧಿತರಾದ ಇಬ್ಬರನ್ನು ಗಡೀಪಾರು ನಡೆಸಬೇಕು ಎಂದು ಎಸ್ ಡಿಪಿ ಐ ಮುಖಂಡ ಹ್ಯಾರೀಸ್ ಮಲಾರ್ ಒತ್ತಾಯಿಸಿದ್ದಾರೆ. ಇಬ್ಬರು ವಿಪರೀತ ಮದ್ಯ ಸೇವಿಸಿ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.