ಮಂಗಳೂರು ಜ 08 : ಕರಾವಳಿ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡು ಬರುತ್ತಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಈ ಸಾವಿನಲ್ಲಿ ಎರಡೂ ಧರ್ಮದ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ. ಘಟನಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದು ಧರ್ಮದ ವ್ಯಕ್ತಿಯ ಕೊಲೆಯಾದ ಬಳಿಕ ಇನ್ನೊಂದು ಧರ್ಮದ ವ್ಯಕ್ತಿಯ ಕೊಲೆಯಾಗುತ್ತಿದೆ.
ಕರಾವಳಿ ಭಾಗದ ಜನರು ಶಾಂತಿಪ್ರಿಯರಾಗಿದ್ದು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮತ್ತು ಸ್ನೇಹದಿಂದ ಸಹಜ ಜೀವನ ನಡೆಸುತ್ತಿದ್ದ ಜನರಲ್ಲಿ ಸಂಶಯ, ಅಪನಂಬಿಕೆ ಮತ್ತು ಸೇಡಿನ ಭಾವನೆಗಳು ಕಾಣುತ್ತಿವೆ. ಈ ಸಾವು-ನೋವಿನ ಸಂದರ್ಭದಲ್ಲಿ ನಿರ್ಧಿಷ್ಟವಾದ ಉದ್ದೇಶಗಳು ತಿಳಿಯುತ್ತಿಲ್ಲವಾದರೂ ಪರಸ್ಪರ ಅಪನಂಬಿಕೆ ಮತ್ತು ಅಶಾಂತಿಗೆ ಕಾರಣವಾಗುತ್ತಿವೆ. ವಿಚಾರ ಭೇದಗಳಿದ್ದಲ್ಲಿ ಪರಸ್ಪರ ಮಾತುಕತೆ ಹಾಗೂ ವಿಚಾರ ವಿನಿಮಯದೊಂದಿಗೆ ಪರಿಹರಿಸಿಕೊಳ್ಳಬಹುದಾದುದನ್ನು ಹಿಂಸಾ ಹಂತಕ್ಕೆ ಕೊಂಡೊಯ್ಯುವುದು ಯಾವ ಧರ್ಮಕ್ಕೂ ಶ್ರೇಯಸ್ಕರವಲ್ಲ.
ಅವಸರದ ಮತ್ತು ಉದ್ವೇಗದ ತೀರ್ಮಾನಗಳು ಹಾಗೂ ಘಟನೆಗಳಿಂದ ನಿರ್ಧಿಷ್ಟ ಗುರಿ ಮತ್ತು ಪರಿಹಾರವಿಲ್ಲದೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ದಯವಿಟ್ಟು ಎಲ್ಲರೂ ಶಾಂತಿ ಮತ್ತು ಸಾಮರಸ್ಯವನ್ನು ಬಯಸಿ ಜನ ಜೀವನದಲ್ಲಿ ಸಹಜತೆ ಹಾಗೂ ಸೌಹಾರ್ದ ಬರುವಂತೆ ನಡೆದುಕೊಳ್ಳಬೇಕಾಗಿದೆ. ಪ್ರತೀಕಾರದ ಮನೋಧರ್ಮವನ್ನು ತೊರೆದು ವಿಶ್ವಾಸ ಮತ್ತು ಸ್ನೇಹದ ವಾತಾವರಣವನ್ನು ಉಂಟು ಮಾಡೋಣ.
ಇತ್ತೀಚೆಗೆ ನಡೆದ ಹಲ್ಲೆಯ ಸಂದರ್ಭದಲ್ಲಿ ಎರಡು ಕೋಮಿನ ವ್ಯಕ್ತಿಗಳು ಗಾಯಗೊಂಡಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದವರನ್ನು ಗಮನಿಸಿದರೆ ಅವರು ವ್ಯಕ್ತಿಯ ಧರ್ಮವನ್ನು ಗಮನಿಸದೆ ಸ್ಪಂದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮೆರೆಯುತ್ತದೆ. ಜಾತಿ, ಮತ, ಧರ್ಮವಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಈ ಸಂದರ್ಭದಲ್ಲಿ ವಿಶೇಷವಾಗಿ ಯುವ ಜನತೆ ಸಂಯಮ ಮತ್ತು ತಾಳ್ಮೆಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ. ಸದ್ಯದ ಸಂಶಯ ಮತ್ತು ಭಯದ ವಾತಾವರಣವನ್ನು ದೂರ ಮಾಡಿ ಧರ್ಮವನ್ನು ಗೌರವಿಸಿ ವ್ಯವಹಾರದಲ್ಲಿ ಭೇದಗಳನ್ನು ಪರಿಹರಿಸಿಕೊಳ್ಳುವ ನಡೆ-ನುಡಿಯನ್ನು ಅನುಸರಿಸಬೇಕು.
ಧರ್ಮವನ್ನು ಗೌರವಿಸೋಣ. ಪ್ರತೀಕಾರ ಮತ್ತು ಸೇಡನ್ನು ಬದಿಗಿರಿಸೋಣ. ಎಲ್ಲರೂ, ವಿಶೇಷವಾಗಿ ಅಂದರೆ ತಂದೆ-ತಾಯಿ, ಸಹೋದರರು-ಸಹೋದರಿಯರು ತಮ್ಮ ಮನೆಗಳಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಮಾತುಕತೆ ನಡೆಸಿ. ಸಹನೆ, ಸೌಹಾರ್ದ ಮತ್ತು ಸಂಯಮವನ್ನು ಬೆಳೆಸಿಕೊಂಡು ಎಲ್ಲರೂ ಶಾಂತಿ - ಸಾಮರಸ್ಯದಿಂದ ಬಾಳೋಣ.
- ಡಿ. ವೀರೇಂದ್ರ ಹೆಗ್ಗಡೆ