ಮಂಗಳೂರು, ಅ 28 (DaijiworldNews/SM): ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನೋ ಅವರ ಪುತ್ರಿ 16ರ ಹರೆಯದ ಫಿಯೋನಾ ಸ್ವೀಡಲ್ ಕುಟಿನ್ಹೋ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಾಂಜಾ ನಶೆಯಿಂದಲೇ ಆರೋಪಿ ತನ್ನ ಸಹೋದರಿಯನ್ನು ಹತ್ಯೆ ನಡೆಸಿರುವುದು ಸ್ಪಷ್ಟಗೊಂಡಿದೆ. ಇನ್ನು ಈ ನಡುವೆ ಆರೋಪಿ ಗಾಂಜಾ ಸೇವಿಸಿದ್ದ ಎಂಬುವುದನ್ನು ಪೊಲೀಸ್ ಕಮಿಷನರ್ ಡಾ. ಹರ್ಷಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಕ್ಲಿಷ್ಟಕರ ವಿಚಾರವಾಗಿತ್ತು. ಪೊಲೀಸ್ ಇಲಾಖೆಯೇ ತಲೆಕೆಡಿಸಿಕೊಂಡಿದ್ದ ವಿಚಾರವಾಗಿತ್ತು. ಅಂತಿಮವಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ಹೊರ ತರುವಲ್ಲಿ ಇಲಾಖೆ ಶಕ್ತವಾಗಿದೆ ಎಂದಿದ್ದಾರೆ.
ನಾವು ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ಸಂಪೂರ್ಣವಾದ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಅಪ್ರಾಪ್ತ ವಯಸ್ಸಿನ ಬಾಲಕಿ ಕಣ್ಮರೆಯಾಗಿದ್ದರಿಂದ ತನಿಖೆ ತೀವ್ರಗೊಳಿಸಿದ್ದೆವು. ಕಾಲೇಜಿನಿಂದ ಡ್ರಾಪ್ ಔಟ್ ಆಗಿದ್ದ ಅಣ್ಣ ಸಾಮ್ಸನ್ ಚಿಕ್ಕ ಚಿಕ್ಕ ವಿಚಾರಕ್ಕೂ ಮನೆಯಲ್ಲಿ ಜಗಳ ಮಾಡುತ್ತಿದ್ದ. ಗಾಂಜಾ ವ್ಯಸನಿ ಆಗಿದ್ದ ಈತ ತಂಗಿ ಜೊತೆಗೆ ಆಗಾಗೇ ಜಗಳ ಮಾಡುತ್ತಿದ್ದ. ಇದೇ ದ್ವೇಷದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೇಳಲಾಗಿದ್ದು, ಇನ್ನಷ್ಟು ತನಿಖೆ ನಡೆಸಲಿದ್ದೇವೆ. ಅಗತ್ಯ ಬಿದ್ದರೆ ಮನ:ಶಾಸ್ತ್ರಜ್ಞರ ನೆರವು ಪಡೆಯಲಿದ್ದೇವೆ. ಆರೋಪಿ ಸಾಮ್ಸನ್ ಜೊತೆಗೆ ಇನ್ಯಾರಾದರೂ ಭಾಗಿಯಾಗಿದ್ದರೆ ಎನ್ನುವ ವಿಚಾರವನ್ನು ನಾವು ಪರಿಶೀಲಿಸಲಿದ್ದೇವೆ ಎಂದರು.