ಬಂಟ್ವಾಳ ಜ 08 : ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳನ ಮಾಡಲಾಗಿದೆ, ಇದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಮನುವಾದಿ ಚಿಂತನೆಯೇ ಕಾರಣ. ದಲಿತರು, ಹಿಂದುಳಿದವರು, ಮುಸ್ಲಿಮರ ಸಹಿತ ಅಲ್ಪಸಂಖ್ಯಾತರ ಧ್ರುವೀಕರಣ ಇಂದು ಅಗತ್ಯವಿದೆ ಎಂದು ದಲಿತ ಹೋರಾಟಗಾರರು, ಕಾಂಗ್ರೆಸ್, ಎಡಪಕ್ಷಗಳು, ಎಸ್.ಡಿ.ಪಿ.ಐ, ಜೆಡಿಎಸ್, ಬಿಎಸ್ಪಿ ಪಕ್ಷಗಳ ಪ್ರಮುಖರು ಹೇಳಿದರು. ದೇಶದ ಸಂವಿಧಾನ ಪರಾಮರ್ಶೆ, ಸಂವಿಧಾನ ಅವಹೇಳನ ವಿರುದ್ಧ ಕರ್ನಾಟಕ ರಾಜ್ಯ ದಲಿತ್ ಮಹಾಸಭಾ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಜ. 8 ರ ಸೋಮವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಭಾಷಣಕಾರರು, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರಿಂದ ಸಂವಿಧಾನದ ವಿರುದ್ಧ ಹೇಳಿಕೆ ಬಂದಿವೆ ಎಂದು ಆರೋಪಿಸಿದರು.
ಸಂಘ ಪರಿವಾರ ಮತ್ತು ಬಿಜೆಪಿಯ ಅಜೆಂಡಾಗಳು, ಅಹಿಂದ ವಿರೋಧಿಯಾಗಿದೆ ಎಂದು ಅವರು ದೂರಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ ಕುಕ್ಕೇಡಿ, ಬಿ.ಪದ್ಮಶೇಖರ ಜೈನ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಸದಸ್ಯೆ ಮಲ್ಲಿಕಾ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಪುರಸಭಾ ಸದಸ್ಯರಾದ ಪ್ರವೀಣ್, ಮೊನೀಶ್ ಆಲಿ, ಗಂಗಾಧರ್, ವಸಂತಿ ಚಂದಪ್ಪ, ಮೊಹಮ್ಮದ್ ಇಕ್ಬಾಲ್ ಗೂಡಿಬಬಳಿ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ, ಎಸ್.ಡಿ.ಪಿ.ಐ.ಪ್ರಮುಖರಾದ ಹನೀಫ್ ಖಾನ್ ಕೊಡಾಜೆ, ಶಾಹುಲ್ ಹಮೀದ್, ಇಸಾಖ್, ಪ್ರಮುಖರಾದ ರಾಜ ಪಲ್ಲಮಜಲು, ರಾಜೀವ ಕಕ್ಯಪದವು, ಅಬುಬಕ್ಕರ್ ಅಮ್ಮುಂಜೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ರಾಮಣ್ಣ ವಿಟ್ಲ ಮೊದಲಾದವರು ಉಪಸ್ಥಿತರಿದ್ದು ಪ್ರತಿಭಟನೆಗೆ ಬೆಂಬಲ ನೀಡಿದರು. ಇದಕ್ಕೂ ಮುನ್ನ ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಜಾಥಾ ನಡೆಯಿತು.