ಕುಂದಾಪುರ, ಅ 30 (Daijiworld News/MSP): ಕಂಟೈನರ್ ಒಂದರಲ್ಲಿ ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಜಾನುವಾರು ಸಾಗಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ದಾಳಿ ನಡೆಸಿ 21 ಕೋಣ ಹಾಗೂ ಎಮ್ಮೆಗಳನ್ನು ರಕ್ಷಿಸಿ ಪೊಲಿಸರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕೊಲ್ಲೂರು ಸಮೀಪದ ಜಡ್ಕಲ್ನ ನಾಯಿಕೋಡಿ ಚೆಕ್ಪೋಸ್ಟಿನಲ್ಲಿ ಬುಧವಾರ ನಸುಕಿನ ವೇಳೆ ನಡೆದಿದೆ. ಬಂಧಿತ ಆರೋಪಿಗಳನ್ನು ವಾಹನ ಚಾಲಕ ದಾವಣಗೆರೆಯ ನಿಟವಳ್ಳಿ ನಗರ ತಲವಾರು ಹಟ್ಟಿ ನಿವಾಸಿ ಇಮ್ರಾನ್ ಬಾಷಾ(27) ಹಾಗೂ ಹಳೆ ಹುಬ್ಬಳ್ಳಿ ಸದರ್ಶಸೋಫಾ ನಿವಾಸಿ ತಬ್ರೇಜ್ ಬೇಫಾರಿ(22) ಎಂದು ಗುರುತಿಸಲಾಗಿದೆ.
ಆರೋಪಿಗಳಾದ ಇಮ್ರಾನ್ ಹಾಗೂ ತಬ್ರೇಜ್ ಎನ್ನುವವರು ಈಚರ್ ಕಂಟೈನರ್ ಲಾರಿಯಲ್ಲಿ ದಾವಣಗೆರೆಯಿಂದ ಮಂಜೇಶ್ವರದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆಂದು ತಿಳಿದು ಬಂದಿದೆ. ಉಪ ವಲಯ ಅರಣ್ಯಾಧಿಕಾರಿ ದಯಾನಂದ ಕೆ. ಹಾಗೂ ಅರಣ್ಯ ವೀಕ್ಷಕ ಜನಾರ್ಧನ ಪೂಜಾರಿ ಗಸ್ತಿನಲ್ಲಿದ್ದಾಗ ಕೊಲ್ಲೂರು ರಾಜ್ಯ ಹೆದ್ದಾರಿ 27ರಲ್ಲಿ ನಾಯಿಕೋಡಿ ಎಂಬಲ್ಲಿರುವ ಚೆಕ್ಪೋಸ್ಟಿನಲ್ಲಿ ತಪಾಸಣೆ ವೇಳೆ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಂಟೈನರ್ ವಾಹನ ತಡೆದು ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದಲ್ಲಿದ್ದ ನಾಲ್ಕು ಲಕ್ಷದ ಎಂಭತ್ತು ಸಾವಿರ ಮೌಲ್ಯದ ೧೨ ಕೋಣಗಳು ಹಾಗೂ ಎರಡು ಲಕ್ಷದ ಎಪ್ಪತ್ತು ಸಾವಿರ ಮೌಲ್ಯದ ೯ ಎಮ್ಮೆಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ಸಂದರ್ಭ ಕೊಲ್ಲೂರು ಬಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.