ಕಾಸರಗೋಡು, ಅ 30 (Daijiworld News/MSP): ಮೂಡಂಬೈಲು ಸರಕಾರಿ ಕನ್ನಡ ಪ್ರೌಢಶಾಲೆಗೆ ನೇಮಕಗೊಂಡಿರುವ ಕನ್ನಡೇತರ ಭೌತಶಾಸ್ತ್ರ ಶಿಕ್ಷಕ ಬುಧವಾರ ಶಾಲೆಗೆ ಹಾಜರಾಗುತ್ತಿದ್ದಂತೆಯೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಕನ್ನಡ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಹಿನ್ನಲೆಯಲ್ಲಿ ಶಿಕ್ಷಕ ವಾಪಸ್ ತೆರಳಿದ್ದು, ನಿಯಮದಂತೆ ಕರ್ತವ್ಯಕ್ಕೆ ಹಾಜರಾಗಲು ನಾಳೆ ಮತ್ತೆ ಪೊಲೀಸ್ ರಕ್ಷಣೆಯೊಂದಿಗೆ ಬರಲಿದ್ದಾರೆ ಎಂಬ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ನಾಳೆ (ಅ.31) ಬೆಳಗ್ಗೆ 9 ಗಂಟೆಯಿಂದಲೇ ಶಾಲೆಯಲ್ಲಿ ಊರವರು, ಕನ್ನಡಾಭಿಮಾನಿಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮೂಡಂಬೈಲ್ ಸರಕಾರಿ ಕನ್ನಡ ಪ್ರೌಢಶಾಲೆಗೆ ಭೌತಶಾಸ್ತ್ರ ಅಧ್ಯಾಪಕರಾಗಿ ಕನ್ನಡ ಬಾರದ ಶಿಕ್ಷಕರೋರ್ವರನ್ನು ನೇಮಿಸಿ ಕೇರಳ ಸರಕಾರ ಆದೇಶ ಹೊರಡಿಸಿತ್ತು. ಈ ಬಗ್ಗೆ ಮಂಗಳವಾರ ಕಾಸರಗೋಡು ಜಿಲ್ಲಾ ಪಂಚಾಯತ್ ಸಭೆಯಲ್ಲೂ ಭಾರೀ ಗದ್ದಲ ಉಂಟಾಗಿತ್ತು. ಇದರಿಂದ ಕನ್ನಡ ಬಾರದ ಶಿಕ್ಷಕರು ಕನ್ನಡ ಶಾಲೆಯ ಕರ್ತವ್ಯಕ್ಕೆ ಹಾಜರಾಗಳು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಭರವಸೆ ನೀಡಿದ್ದರು. ಆದರೆ ಇಂದು ಮಧ್ಯಾಹ್ನ ಶಿಕ್ಷಕ ಶಾಲೆಗೆ ಬರುತ್ತಿದ್ದಂತೆ ಕನ್ನಡ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದರು. ನಾಳೆ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗಲು ಕೊನೆ ದಿನವಾಗಿದೆ. ಇದರಿಂದ ನಾಳೆ ಶಿಕ್ಷಕ ಪೊಲೀಸ್ ಭದ್ರತೆಯೊಂದಿಗೆ ಶಾಲೆಗೆ ತಲಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಶಿಕ್ಷಣಾಧಿಕಾರಿಗಳು ಈ ಕಡೆ ಸುಳಿಯದಿರುವುದು ಪ್ರಶ್ನಿಸುವಂತೆ ಮಾಡಿದೆ. ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಕುರಿತು ಜಿಲ್ಲಾ ಶಿಕ್ಷಣ ಇಲಾಖಾ ನಿರ್ದೇಶಕಿಗೆ ಸೂಚಿಸಲಾಗಿತ್ತು . ಶಾಲಾ ಪೋಷಕರು , ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು . ಆದರೆ ಈ ಬಗ್ಗೆ ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗದಿರುವುದು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ