ಹೆಜಮಾಡಿ, ಅ 31 (Daijiworld News/MSP): ಟಿಪ್ಪು ‘ಜಯಂತಿ ಆಚರಣೆ’ಯು ಇಸ್ಲಾಂ ಧರ್ಮದಲ್ಲಿ ಇಲ್ಲದಿದ್ದರೂ ಮುಂದುವರಿಸಿ ಈ ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟುಮಾಡಲಾಗಿತ್ತು. ರಾಜಕಾರಣಕ್ಕಾಗಿ ಟಿಪ್ಪುವನ್ನು ವೈಭವೀಕರಿಸಿದ್ದ ಈ ಹಿಂದಿನ ರಾಜ್ಯ ಸರಕಾರಗಳ ನಿರ್ಧಾರಗಳು ತಪ್ಪಾಗಿದ್ದವು. ಮತಾಂಧ, ದುರಂಹಕಾರಿಯಾಗಿದ್ದ ಟಿಪ್ಪುವಿನ ಕುರಿತಾದ ವಿಷಯವನ್ನು ಮಕ್ಕಳಿಗೆ ಕಲಿಸುವುದು ಈ ದೇಶದ ಸಂಸ್ಕೃತಿಯಲ್ಲ, ಹಾಗಾಗಿ ಅದನ್ನು ಪಠ್ಯದಿಂದ ತೆಗೆಯಲು ಆದೇಶಿಸಲಾಗಿರುವ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ ಎಂಬುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಹೆಜಮಾಡಿಯಲ್ಲಿ ಪತ್ರಕರ್ತರೊಂದಿಗೆ ನಳಿನ್ ಮಾತನಾಡಿದರು. ಮಂಗಳೂರು ನಗರದಲ್ಲಿನ ‘ನೆತ್ತರಕೆರೆ ಪ್ರದೇಶ’ವು ಟಿಪ್ಪುವು ಕ್ರೈಸ್ತರನ್ನು ದಮನಿಸಿದ್ದ ನೆತ್ತರ ಕಥೆಯನ್ನು ಹೇಳುತ್ತಿದ್ದು ಇದೇ ಕಾರಣಕ್ಕೆ ಕ್ರೈಸ್ತರೂ ಟಪ್ಪುವನ್ನು ವಿರೋಧಿಸುತ್ತಿದ್ದಾರೆ ಎಂದೂ ನಳಿನ್ ತಿಳಿಸಿದರು.
ರಾಜ್ಯದಲ್ಲಿ ಕೆಲ ನಗರಸಭೆ, ಮಹಾನಗರಪಾಲಿಕೆಗಳಿಗೆ ಚುನಾವಣೆ ನಡಿಯಲಿದೆ. ತಮ್ಮ ಪಕ್ಷದ ಸಿದ್ಧತೆಯು ಪೂರ್ಣಗೊಂಡಿದ್ದು ಅತೀ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯಲಿದೆ. ವಿಧಾನಸಭಾ ಉಪಚುನಾವಣೆಯಲ್ಲೂ ತಾವು ೧೫ಸ್ಥಾನಗಳನ್ನು ಗೆಲ್ಲುವುದಾಗಿಯೂ, ಪಕ್ಷದ ಸಾಂಸ್ಥಿಕ ಚುನಾವಣೆಗಳೂ ಕಾರ್ಯಸೂಚಿಯಲ್ಲಿರುವಂತೆಯೇ ನ. ೩೦ರೊಳಗಾಗಿ ಪೂರ್ತಿಗೊಳ್ಳಲಿದೆ ಎಂದೂ ನಳಿನ್ ಭರವಸೆ ವ್ಯಕ್ತಪಡಿಸಿದರು.