ಕುಂದಾಪುರ, ಜ 08: ಕರಾವಳಿಯ ಸದ್ಯದ ಪರಿಸ್ಥಿತಿಗೆ ಕೋಮುವಾದಿ ಶಕ್ತಿಗಳು ಮತ್ತು ಸಂಘಪರಿವಾರದ ಕುಮ್ಮಕ್ಕು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅವರು ಬೈಂದೂರು ವಿಧಾನಸಭಾ ಕ್ಷೇತ್ರ 490 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆಂದು ಅರೆಶಿರೂರಿಗೆ ಬಂದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಂಘಪರಿವಾರದರು ಮೊದಲು ಕುಮ್ಮಕ್ಕು ನೀಡುವುದನ್ನ ಬಿಡಬೇಕು. ಬಿಜೆಪಿ ಕೋಮುವಾದ ಬಿಡಬೇಕು, ಅವರು ಬಿಟ್ರೆ ಯಾರು ಮಾಡಲ್ಲ ಎಂದರು. ಕೋಮುವಾದ ಪ್ರಚೋದಿಸುವ ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ಯಾವುದೇ ಸಂಘಟನೆಗಳನ್ನ ನಿಷೇಧಿಸುವ ಕುರಿತು ಚಿಂತನೆ ನಡೆದಿಲ್ಲ. ಆದರೆ ಪಿಎಫ್ಐ, ಬಜರಂಗದಳ, ಶ್ರೀರಾಮಸೇನೆಗಳ ಮೇಲೆ ನಿಗಾ ಇಡಲು ಸೂಚಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನ ಹಿಂದೂ ವಿರೋಧಿಗಳೆಂದವರ್ಯಾರು? ನಮ್ಮನ್ನ ದೂಷಿಸುವವರು ಹಿಂದೂಗಳೂ ಅಲ್ಲ, ಮನುಷ್ಯರೂ ಅಲ್ಲ. ಯು.ಪಿ ಸಿಎಂ ಯೋಗಿ ಮತ್ತು ತಮ್ಮ ನಡುವಿನ ಟ್ವಿಟ್ಟರ್ ವಾರ್ ಕುರಿತು ಪ್ರತಿಕ್ರಿಯಿಸಿದ ಅವರು ನಮಗೆ ಪಾಠ ಹೇಳಲು ಉ.ಪ್ರ ಅಭಿವೃದ್ಧಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ? ನಾವು ಅಭಿವೃದ್ಧಿಯಲ್ಲಿ ನಂ 1 ಆಗಿದ್ದೇವೆ. ಉತ್ತರಪ್ರದೇಶ ಜಂಗಲ್ ರಾಜ್, ಅಲ್ಲಿನ ಮುಖ್ಯಮಂತ್ರಿ ಜಂಗಲ್ರಾಜ್ ಮುಖ್ಯಮಂತ್ರಿ, ಗೋಡ್ಸೆ ಅನುಯಾಯಿಂದ ಅಭಿವೃದ್ಧಿ ಪಾಠ ಬೇಡ. ಒಬ್ಬ ವ್ಯಕ್ತಿ ಸೇವಿಸುವ ಆಹಾರದಿಂದ ಅವನ ಹಿಂದುತ್ವ ನಿರ್ಧರಿತವಾಗಲ್ಲ ಎಂದು ಗುಡುಗಿದರು.
ಕಲ್ಲಡ್ಕ ಶಾಲೆಗೆ ಕೊಲ್ಲೂರು ಮೂಕಾಂಬಿಕಾ ದೇವಳದಿಂದ ಊಟ ನೀಡುವ ವಿಚಾರವಾಗಿ ಮಾತನಾಡಿದ ಅವರು, ಕಲ್ಲಡ್ಕ ಶಾಲೆಗೆ ಏಕೆ ಊಟ ನೀಡಬೇಕು? ಅದರ ಬದಲು ಬೇರೆ ಶಾಲೆಗಳಿಗೆ ಊಟ ನೀಡಬಹುದಲ್ಲ ಎಂದು ಮರುಪ್ರಶ್ನಿಸಿದ್ರು.
ಉಡುಪಿಗೆ ಹಲವು ಬಾರಿ ಬಂದರೂ ಕೃಷ್ಣಮಠಕ್ಕೆ ಭೇಟಿ ನೀಡದೇ ಇರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕೃಷ್ಣಮಠಕ್ಕೆ ಭೇಟಿ ನೀಡದೇ ಇರೋದ್ರಿಂದ ದೇವಸ್ಥಾನಗಳಿಗೇ ಹೋಗಲ್ಲ ಎಂಬರ್ಥವಲ್ಲ. ನಾನೂ ದೇವಸ್ಥಾನಗಳಿಗೆ ಹೋಗುತ್ತೇನೆ. ಆದರೆ ಕೃಷ್ಣಮಠಕ್ಕೆ ಹೋಗದೇ ಇರುವುದು ದೊಡ್ಡ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.