ಮಂಗಳೂರು, ಅ 31 (DaijiworldNews/SM): ಟ್ರಾಫಿಕ್ ಪೊಲೀಸರೊಬ್ಬರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಆರೋಪದಡಿ ವಾಹನ ಸವಾರರೊಬ್ಬರ ನಡುವಿನ ಮಾತಿನ ಚಕಮಕಿ ಹಾಗೂ ಸವಾರನನ್ನು ಎಳೆದಾಡಿದ ಘಟನೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ಈ ನಡೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆಯ ವಾಸ್ತವಾಂಶದ ಬಗ್ಗೆ ವರದಿ ನೀಡಲು ಸಹಾಯಕ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪವಿಭಾಗ ಇವರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಆದೇಶಿಸಿದ್ದಾರೆ. ಈ ಬಗ್ಗೆ ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರಕಟನೆ ತಿಳಿಸಿದೆ.
ಇನ್ನು ಈ ವೀಡಿಯೋ ತುಣುಕು ಬಂಟ್ವಾಳ ತಾಲೂಕಿನ ಮೆಲ್ಕಾರ್ ಜಂಕ್ಷನ್ ಸಮೀಪದ ಗುಡ್ಡೆಯಂಗಡಿ ರಸ್ತೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೆಲ್ಕಾರ್ ಟ್ರಾಫಿಕ್ ಠಾಣೆಯ ಎಎಸ್ಸೈ ಹಾಗೂ ಸಂಚಾರ ಉಲ್ಲಂಘನೆ ಮಾಡಿದ ಸವಾರನ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದ್ದು, ಬಳಿಕ ಎಎಸ್ಸೈ ಅವರು ಸವಾರನೋರ್ವನ ಬಟ್ಟೆ ಹಿಡಿದು ಎಳೆದಾಡಿದ ಸನ್ನಿವೇಶವನ್ನು ಇನ್ನೋರ್ವ ಸವಾರ ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ.
ಪೊಲೀಸರ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ, ವಿವಿಧ ಬರಹಗಳೊಂದಿಗೆ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.