ಮಂಗಳೂರು, ನ 01 (Daijiworld News/MSP): ಕಡಲತಡಿಯ ನಗರ ಮಂಗಳೂರು ಸೇರಿದಂತೆ ಭಾರತದ ಹಲವು ಕಡಲ ತೀರದ ಪ್ರದೇಶಗಳಿಗೆ ಕಂಟಕ ಎದುರಾಗಿದೆ.
ಈ ಬಗ್ಗೆ ಅಮೆರಿಕದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು ಈ ವರದಿಯ ಪ್ರಕಾರ 2050ನೇ ವರ್ಷದ ವೇಳೆಗೆ ಮಂಗಳೂರು, ಮುಂಬೈ, ಕೊಲ್ಕತ್ತಾ ನಗರಗಳ ಹಲವು ಪ್ರದೇಶಗಳು ಸಮುದ್ರದ ಅಪೋಶನ ಪಡೆಯುವ ಸಾಧ್ಯತೆ ಇದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳು ಕರಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು ಹಸಿರುಮನೆ ಪರಿಣಾಮದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ. ಅಮೆರಿಕದ ಕ್ಲೈಮೇಟ್ ಸೆಂಟ್ರಲ್ ಸಂಸ್ಥೆ ಈ ಅಧ್ಯಯನ ನಡೆಸಿ ವರದಿ ನೀಡಿದ್ದು ಇದು ಈಗ ಆತಂಕಕ್ಕೆ ಕಾರಣವಾಗಿದೆ.
ಸಮುದ್ರ ನೀರಿನ ಮಟ್ಟದ ಏರಿಕೆಯಿಂದ ಭಾರತಾದ್ಯಂತ ಸುಮಾರು 3.5 ಕೋಟಿ ಜನರು ತಮ್ಮ ವಾಸಸ್ಥಳವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಅಧ್ಯಯನ ವರದಿ ಹೊರಹಾಕಿದೆ. ಅಲ್ಲದೆ ಸಮುದ್ರ ತೀರದ ನದಿಯ ನೀರಿನ ಮಟ್ಟದಲ್ಲೂ ಹೆಚ್ಚಳವಾಗಲಿದ್ದು, ಹೀಗಾಗಿ ಹಲವು ಪ್ರದೇಶಗಳು ಮುಳುಗಡೆಯಾಗಲಿದೆ.
ಸಮುದ್ರ ಹಾಗೂ ನದಿ ನೀರಿನ ಮಟ್ಟದ ಹೆಚ್ಚಳದಿಂದ ಮೂಲಸೌಕರ್ಯ ಮತ್ತು ಕೃಷಿಭೂಮಿ ಹಾನಿಗೊಳಿಸಬಹುದು ಹಾಗೂ ಕರಾವಳಿಯ ಜನಸಮುದಾಯ ಶಾಶ್ವತ ಸ್ಥಳಾಂತರವಾಗಬೇಕಾದ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.