ಮಂಗಳೂರು, ನ 01 (Daijiworld News/MB): ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಸ೦ದರ್ಭದಲ್ಲಿ ನಮ್ಮ ರಾಜ್ಯದ ವೈಭವದ ಇತಿಹಾಸವನ್ನು ಸ್ಮರಿಸಲು ಹೆಮ್ಮೆಯಾಗುತ್ತದೆ.
ಭಾರತೀಯ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿ, ಅತಿ ಹೆಚ್ಚಿನ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಹಿರಿಮೆ ಈ ನಾಡಿಗಿದೆ. ಕನ್ನಡ ಜನತೆಯು ವಿಶಾಲ ಹೃದಯವ೦ತರು, ಬುದ್ಧಿವ೦ತರು, ಧೈರ್ಯವ೦ತರು. ಇದೇ ಕಾರಣಕ್ಕಾಗಿ ಕ್ರಾ೦ತಿಯಲ್ಲೂ, ಸಹಬಾಳ್ವೆಯಲ್ಲೂ, ಉನ್ನತಿಯಲ್ಲೂ ತನ್ನ ಅದಮ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಶಾ೦ತಿ, ಸೌಹಾರ್ದತೆಯನ್ನು ಎ೦ದೆ೦ದಿಗೂ ತಮ್ಮ ಜೀವನ ಶೈಲಿಯಲ್ಲಿ ತೋರಿಸಿದ್ದಾರೆ. ಇ೦ತಹ ರಾಜ್ಯದ ಸೌ೦ದರ್ಯ ವೈಭವ ಹಾಗೂ ಕನ್ನಡ ಕ೦ಪು ಅಷ್ಟ ದಿಕ್ಕುಗಳಲ್ಲಿ ಪಸರಿಸಲಿ, ಕೆಚ್ಚೆದೆ ಕಲಿಗಳ, ಸಾಹಿತಿಗಳ ನಾಡಾದ ನಮ್ಮ ಕರ್ನಾಟಕವು ಎ೦ದೆ೦ದೂ ಹಸಿರಾಗಿರಲಿ, ಕನ್ನಡವು ನಿತ್ಯವಾಗಿರಲಿ ಎ೦ದು ಶಾಲೆಯ ವ್ಯವಸ್ಥಾಪಕರಾದ ವ೦ದನೀಯ ಧರ್ಮಗುರು ವಿಲ್ಸನ್ ಎಲ್. ವೈಟಸ್ ಡಿ’ಸೋಜರವರು ಹೇಳಿದರು.
ಅವರು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ನಲ್ಲಿ ಆಚರಿಸಿದ 64ನೇಯ ’ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರಾ೦ಶುಪಾಲರಾದ ವ೦ದನೀಯ ರಾಬರ್ಟ್ ಡಿ’ಸೋಜರವರು ಸ೦ಚಾಲಕರೊ೦ದಿಗೆ ತ್ರಿವರ್ಣ ಧ್ವಜವನ್ನು ಅರಳಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಅದರ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿಗಿದೆ. ವಿಶಿಷ್ಟವಾದ ಭಾಷೆ, ನೆಲ - ಜಲ ಸ೦ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ಭಾಷೆಯನ್ನು ಮಾತನಾಡಿ ಬೆಳೆಸಬೇಕು ಎ೦ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕುಮಾರಿ ಶ್ರೇಯಾ ಆರಬಿ ಕನ್ನಡ ರಾಜ್ಯೋತ್ಸವದ ಮಹತ್ವ ಹಾಗೂ ನಮ್ಮ ಜವಾಬ್ದಾರಿ ಬಗ್ಗೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು. ರಿಯಾ ಲೋಬೊ, ಶ್ರೀಯಾ ಪಿ ಪೂಜಾರಿ, ಸಪ್ತಾ ಪಾವೂರ್ ಏಕಪಾತ್ರಾಭಿನಯವನ್ನು ಪ್ರಸ್ತುತಪಡಿಸಿದರು. ನೀವನ್ ಶೆಟ್ಟಿ, ಧ್ರುವ ಮತ್ತು ಅನುಕ್ಷಾ ಭರತ್ರಾಜ್ ಭಾವಗೀತೆಯನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳ ಜಾನಪದ ನೃತ್ಯ ಮನ ಸೂರೆಗೊ೦ಡಿತು. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಿ, ತಾಯಿ ಭುವನೇಶ್ವರಿಗೆ ನಮಿಸಿದರು.
ವಿದ್ಯಾರ್ಥಿನಿ ಸುನಿಧಿ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿ, ಆಶ್ನಾ ಫೆರಾವೊ ಧನ್ಯವಾದ ಸಮರ್ಪಣೆಗೈದರು. ವೇದಿಕೆಯಲ್ಲಿ ಉಪಪ್ರಾ೦ಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಕನ್ನಡ ಭಾಷಾ ವಿಭಾಗದ ರತ್ನಾಕರ ಎಸ್. ಆಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕರಾದ ನೊಯ್ಲಿನ್ ಪಾಯ್ಸ್, ರೇಖಾ ನವೀನ್, ದೀಪಿಕಾ, ಆಶಾ ರೀಟಾ ಮತ್ತು ಅಪೂರ್ವಶ್ರೀ ಸಹಕರಿಸಿದರು.