ಚಿಕ್ಕಮಗಳೂರು, ಜ 8: ಸಂಘಟನೆಗಳ ಬೆದರಿಕೆಗೆ ಹೆದರಿ, ಮನನೊಂದ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಳೆದ ಎರಡು ದಿನದ ಹಿಂದೆ ಮೂಡಿಗೆರೆಯ ಡಿಎಸ್ಬಿಜಿ ಸರ್ಕಾರಿ ಕಾಲೇಜಿನ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಧನ್ಯಶ್ರೀ(20) ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಅನ್ಯಕೋಮಿನ ಯುವಕನ ಜೊತೆ ಮಾತುಕತೆ ನಡೆಸುತ್ತಿದ್ದಳು ಎನ್ನುವ ಆರೋಪ ಧನ್ಯಶ್ರೀ ಮೇಲೆ ಇತ್ತು. ಹೀಗಾಗಿ ಸಂಘಟನೆಯ ಕೆಲ ಹುಡುಗರು ಆಕೆಯ ಮನೆಗೆ ಹೋಗಿ ಕಿರುಕುಳ ನೀಡಿದ್ದು, ಬೆದರಿಕೆಯನ್ನೂ ಹಾಕಿದ್ದರು.ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು.
ಧನ್ಯಶ್ರೀ ತನ್ನಗೆಳೆಯ ಸಂತೋಷ್ ಜೊತೆ ವಾಟ್ಸಪ್ನಲ್ಲಿ ಚಾಟ್ ಮಾಡುವಾಗ ಅನ್ಯಕೋಮಿನ ಯುವಕನ ಪರವಾಗಿ ಮಾತಾಡಿದ್ದಳು. ಜೊತೆಗೆ ಐ ಲವ್ ಮುಸ್ಲಿಮ್ಸ್ ಎಂದು ಮೇಸೆಜ್ ಮಾಡಿದ್ದಾಳೆ. ಇದೇ ವಿಚಾರವಾಗಿ ಸಂತೋಷ್ ಜೊತೆ ಸಾಕಷ್ಟು ಚರ್ಚೆ ನಡೆಸಿದ್ದಾಳೆ. ಈ ವೇಳೆ ಅನ್ಯ ಧರ್ಮೀಯ ಹುಡುಗನ ಜೊತೆ ಸ್ನೇಹ ಮಾಡದ ಹಾಗೆ ಸಂತೋಷ್ ವಿದ್ಯಾರ್ಥಿನಿಗೆ ಧಮ್ಕಿ ಹಾಕಿದ್ದಾನೆ. ಧನ್ಯಶ್ರೀ ಮಾಡಿದ ವಾಟ್ಸಪ್ ಮೆಸೇಜ್ನ ಸ್ಕ್ರೀನ್ಶಾಟನ್ನು ಸಂತೋಷ್ ಮೂಡಿಗೆರೆಯ ಬಜರಂಗದಳ, ಹಿಂದೂಪರ ಸಂಘಟನೆಗಳ ಗ್ರೂಪ್ಗೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ಕ್ರೋಧಗೊಂಡ ಕೆಲ ಹುಡುಗರು ಧನ್ಯಶ್ರೀ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ತಾಯಿ ಮತ್ತು ಮಗಳಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಸಂಬಂಧ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅನಿಲ್ ಬಂಧಿಸಲಾಗಿದೆ. ಬಂಧಿತ ಅನಿಲ್ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಉಳಿದ ಸಂಘಟನೆಗಳ ಮುಖಂಡರು ಯಾರೇ ಈ ಪ್ರಕರಣದ ಹಿಂದೆ ಇದ್ದರೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
.