ಕುಂದಾಪುರ, ನ 01 (Daijiworld News/MSP): ಬೈಂದೂರು ತಾಲೂಕಿನ ಕಾಲ್ತೋಡು ಎಂಬಲ್ಲಿ ಅತೀ ಅಪರೂಪವಾದ ಪ್ರಾಚೀನ ತಂಬೂರಿ ನಾಗ ಶಿಲ್ಪ ಪತ್ತೆಯಾಗಿದೆ. ಕರಾವಳಿಯ ಈ ಭಾಗದಲ್ಲಿ ನಾಗರ ಆರಾಧನೆಯು ಬಹಳ ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಿರುವುದು ಸಹಜವೇ ಸರಿ. ಈಗಿನ ನಾಗ ದೇವರ ಶಿಲ್ಪಗಳಿಗೂ ಹಿಂದಿನ ನಾಗ ದೇವರ ಶಿಲ್ಪಗಳಿಗೂ ಬಹಳ ವಿಭಿನ್ನವಾಗಿದೆ.ಅಂತೆಯೇ ಬೈಂದೂರು ಕಾಲ್ತೋಡು ನ ಚಿತ್ತೇರಿಯಲ್ಲಿ ಅತೀ ವಿಶೇಷವಾಗಿ ಕಾಣಲ್ಪಡುವ ತಂಬೂರಿ ನಾಗ ದೇವರ ಶಿಲ್ಪ ಕಲೆ ಪತ್ತೆಯಾಗಿದೆ.
ಬಲ ಭಾಗದ ಕೆಳಗಡೆ ಅವಳಿ ನಾಗ ಹಾಗೂ ಎಡಭಾಗದಲ್ಲಿ ಮೂರು ಹೆಡೆಹೊಂದಿರುವ ನಾಗ ಶಿಲ್ಪ ಮಧ್ಯದಲ್ಲಿ ಬೃಹದಾಕಾರದಲ್ಲಿ ಕಾಣಲ್ಪಡುವ ಅರ್ಧ ಭಾಗ ಮಾನವ ರೂಪವನ್ನು ಹೋಲಿದರೆ ಇನ್ನರ್ಧ ಭಾಗವನ್ನು ನಾಗ ರೂಪವನ್ನು ಹೋಲುವಂತಹ ಶಿಲ್ಪಕಲೆ ಇದೆ. ಬಲ ಭಾಗದಲ್ಲಿ ಮಹಿಳೆ ನಿಂತಿರುವ ರೀತಿಯಲ್ಲಿ ಕಾಣಲ್ಪಟ್ಟಿದ್ದು ಪಕ್ಕದಲ್ಲಿ ವಾದ್ಯದ ಸಲಕರಣೆ ಯಂತೆ ಕಾಣಲ್ಪಟ್ಟಿದೆ. ಹಾಗೂ ಈ ತಂಬೂರಿ ನಾಗರ ಶಿಲ್ಪ ಪ್ರಾಯಶ: ಅರ್ಧ ಭಾಗದಷ್ಟು ಶಿಥಿಲಗೊಂಡಿದ್ದು,ಕಲ್ಲು ಬಹಳ ಹಳೆಯ ಕಾಲದ್ದಾಗಿದೆ(ಕ್ರಿ.ಶ 11 ರಿಂದ 15 ನೇಯ ಶತಮಾನದ ಕಾಲ)
ಈ ಹಿಂದೆಯೂ ಸಹಾ ಇಂತಹ ಶಿಲ್ಪ ಕಲೆಯ ಮೂರ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಭಾಗದ ಕೆರ್ವಾಸೆ ಎಂಬಲ್ಲಿ ಉಡುಪಿಯ ಇತಿಹಾಸ ತಜ್ಞರು ಪತ್ತೆ ಹಚ್ಚಿದ್ದು, ತಂಬೂರಿ ನಾಗ ಶಿಲ್ಪ, ಜೈನ ನಾಗ ಶಿಲ್ಪಗಳು, ಚರನಾಗ, ಶಿಲ್ಪಗಳು, ಹಾಗೂ ಮುರ ಕಲ್ಲಿನಲ್ಲಿ ಮಾಡಿದ ನಾಗ ಶಿಲ್ಪಗಳು ಮತ್ತು ಚಿತ್ರಕೂಟದ ಅವಶೇಷಗಳನ್ನು ಪತ್ತೆಹಚ್ಚಿದ್ದು ಒಟ್ಟು ಕೆರ್ವಾಸೆಯ ಈ ಭಾಗದಲ್ಲಿ ಸುಮಾರು ೧೫ ತಂಬೂರಿ ನಾಗ ಶಿಲ್ಪಗಳು,ಅವುಗಳು ಮುರಕಲ್ಲು ಹಾಗೂ ಬಳಪದ ಕಲ್ಲಿನಿಂದ ಮಾಡಲಾಗಿದೆ .ಇಲ್ಲಿ ಅರ್ಧ ರೂಪ ಮಾನವ , ಕೆಳಭಾಗ ನಾಗರೂಪ ಹೊಂದಿದ್ದು ಕೈಯಲ್ಲಿ ತಂಬೂರಿಯನ್ನು ಹೊಂದಿದೆ. ಹಾಗೇ ಮೂರು ಹೆಡೆಯ,ಐದು ಹೆಡೆಯ,ಏಳು ಹೆಡೆಯ ಶಿಲ್ಪಗಳು ದೊರೆಕಿರುತ್ತವೆ.
ಕಾರ್ಕಳದ ಕೆರ್ವಾಸೆ ಈ ಭಾಗದಲ್ಲಿ ಅತೀ ಹೆಚ್ಚಿನ ಜೈನ ಪ್ರಭಾವಗಳು ಹಾಗೂ ಬಹಳ ಹಿಂದಿನಿಂದಲೂ ಧಾರ್ಮಿಕ ಆಚರಣೆ ಮಾಡಿಕೊಂಡಿರುವುದು ತಿಳಿದಿರುತ್ತದೆ. ಹಾಗೆಯೇ ಕಾಲ್ತೋಡು ಈ ಭಾಗದಲ್ಲಿ ಸಹಾ ಜೈನರ ಕೆಲವೊಂದು ಕೇಂದ್ರಗಳಿರುವುದು ಕಂಡುಬಂದಿರುತ್ತದೆ. ಕಾಲ್ತೋಡಿನ ತಂಬೂರಿ ನಾಗರ ಕಲ್ಲನ್ನು ಶ್ರೀ ಪ್ರದೀಪ ಕುಮಾರ್ ಬಸ್ರೂರು ಇವರು ಪತ್ತೆ ಹಚ್ಚಿದ್ದು ಇವರಿಗೆ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀ ಡಾ| ಆಕಾಶ್ ರಾಜ್ ಸಹಕರಿಸಿರುತ್ತಾರೆ.
"ಈ ಭಾಗದಲ್ಲಿ ಕೋಟೆಗಳು,ಶಾಸನಗಳು,ಜೈನ ಮಂದಿರಗಳು,ದೇವಸ್ಥಾನ ಗಳು ,ಪುರಾತನವಾದ ನಾಗರ ಶಿಲ್ಪಗಳು ಇದ್ದು ಮುಂದಿನ ಹಂತದಲ್ಲಿ ಸಮಗ್ರ ಅಧ್ಯಯನ ಆದರೆ ಕರಾವಳಿಯ ಈ ಭಾಗದ ಧಾರ್ಮಿಕ ಆರಾಧನೆ ಸಂಬಂಧಿಸಿದಂತೆ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ" ಎನ್ನುತ್ತಾರೆ ಪ್ರದೀಪ ಕುಮಾರ್ ಬಸ್ರೂರು.
"ಈ ಸ್ಥಳದ ಸ್ವಲ್ಪ ಹತ್ತಿರದಲ್ಲಿ 11 ನೇಯ ಶತಮಾನದಲ್ಲಿ ಆಳುಪ ಕುಲಶೇಖರ ಕಾಲದ ಶಾಸನ ಈ ಹಿಂದೆ ಇತಿಹಾಸ ತಜ್ಞರಿಗೆ ಹತ್ತಿರದಲ್ಲಿ ಸಿಕ್ಕಿದ್ದು, ತುಳುನಾಡಿನ ಅಖಂಡ ಭಾಗವಾಗಿದ್ದ ಕುಂದಾಪುರ ಪ್ರದೇಶದಲ್ಲಿ ಇನ್ನೂ ಕೂಡಾ ಅಧ್ಯಯನ ಅಗತ್ಯತೆ ಇದೆ. ರಾಜ ವೀರ ಕುಲಶೇಖರನ ಕನ್ನಡ ಶಾಸನ ಸಿಕ್ಕಿದ್ದು, ಮಂಗಳೂರಿನಲ್ಲಿ ತುಳು ಶಾಸನ ಕೂಡಾ ಸಿಕ್ಕಿದ್ದು. ಇಲ್ಲಿ ಕನ್ನಡ ಮತ್ತು ತುಳುವನ್ನು ಸಮಾನ ಪ್ರಾಧ್ಯಾನತೆಯನ್ನು ನೀಡಿರುವುದು ಕಾಣಬಹುದಾಗಿದೆ" ಎನ್ನುತ್ತಾರೆ ಡಾ. ಆಕಾಶ್ ರಾಜ್