ಬಂಟ್ವಾಳ, ನ 01 (Daijiworld News/MSP): ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸಿ, ರದ್ದುಪಡಿಸಿ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಸೂಲಿಗೆ ಜಿಲ್ಲಾಧಿಕಾರಿ ಅದೇಶದಂತೆ ಬಂಟ್ವಾಳ ತಾಲೂಕಿನಲ್ಲಿ ಅನರ್ಹ ಪಡಿತರ ಚೀಟಿದಾರರ ರದ್ದತಿ ಹಾಗೂ ದಂಡ ವಸೂಲಿ ಕಾರ್ಯ ನಡೆಯುತ್ತಿದೆ.
ತಾಲೂಕಿನಲ್ಲಿ ಅ. 30ರವರೆಗೆ 400ಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿದಾರರು ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ಬಂದು ಕಾರ್ಡ್ ರದ್ದು ಪಡಿಸಿ, ಲಕ್ಷ ರೂ. ದಂಡ ಪಾವತಿಯಾಗಿದೆ. ತಾಲೂಕಿನಲ್ಲಿ ಕೆಲವು ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹದಿದ್ದರೂ ಚೀಟಿ ಪಡೆದು, ಅದರ ಸವಲತ್ತುಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ಕೆಲವು ಪಡಿತರ ಚೀಟಿದಾರರು ಸುಳ್ಳು ಮಾಹಿತಿ ನೀಡಿ ಪರಿತರ ಚೀಟಿ ಪಡೆದಿದ್ದರೆ, ಇನ್ನು ಕೆಲವರು ಬಿಪಿಎಲ್ ಪಡಿತರ ಚೀಟಿ ಪಡೆದು, ನಂತರ ಬಿಪಿಎಲ್ಗೆ ಅನರ್ಹರಾಗಿರುವುದು ಕಂಡುಬಂದಿದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 85,528 ಪಡಿತರ ಚೀಟಿದಾರರಿದ್ದು, ಅದರಲ್ಲಿ 2289 ಎಪಿಎಲ್ ಪಡಿತರ ಚೀಟಿದಾರರು ಮತ್ತು 62,719 ಬಿಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಅ. 30ರಂದು 450 ಅನರ್ಹ ಪಡಿತರ ಚೀಟಿ ಪತ್ತೆಯಾಗಿದೆ.
ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್, ಪಡಿತರ ಚೀಟಿ ಹೊಂದಿರುವವರು ಯಾವುದೇ ದಂಡ ವಿಲ್ಲದೆ ಸೆ. 3ರವರಗೆ ಆಹಾರ ಶಾಖೆಗೆ ಹೋಗಿ ಅನರ್ಹ ಕಾರ್ಡ್ದಾರರು ರದ್ದು ಮಾಡುವಂತೆ ಸರಕಾರ ಎಚ್ಚರಿಸಿತ್ತು. ಬಳಿಕ ಅ. 15ರವರೆಗೆ ಅವಧಿ ವಿಸ್ತರಣೆ ಮಾಡಿತ್ತು. ಸರಕಾರ ನೀಡಿದ ಅವಧಿಯ ಬಳಿಕ ಹೋಗಿ ಪಡಿತರ ಚೀಟಿರದ್ದು ಮಾಡಿದವರು ಸರಕಾರದ ನಿಯಮದಂತೆ ದಂಡ ಕಟ್ಟಬೇಕು ಎಂಬುದನ್ನು ಸೂಚಿಸಿತ್ತು. ಪ್ರಸ್ತುತ ಸರಕಾರದ ನಿಯಮದಂತೆ ಇಲಾಖೆ ದಂಡ ವಸೂಲಿ ಮಾಡುತ್ತಿದೆ.
ಯಾರ್ಯಾರು ಅನರ್ಹರು?
ಕುಟುಂಬದಲ್ಲಿ ಸರಕಾರಿ ಅಥವಾ ಅರೆ ಸರಕಾರಿ ಉದ್ಯೋಗ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವವರು, ಪಡಿತರ ಚೀಟಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದೇ ಇರುವವರು, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು, ಮರಣ ಹೊಂದಿದವರ, ಕುಟುಂಬದಲ್ಲಿ ವಾಸವಿಲ್ಲದೇ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು, ಗ್ರಾಮೀಣ ಪ್ರದೇಶದಲ್ಲಿ ೩ಹೆಕ್ಟೇರು ಭೂಮಿ ಹೊಂದಿರುವವರು ನಗರ ಪ್ರದೇಶಗಳಲ್ಲಿ 1000 ಸಾವಿರ ಚ.ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವವರು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬ ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಅಧಿಕ ಇರುವ ಕುಟುಂಬಗಳು ಮೇಲೆ ತಿಳಿಸಿದಂತೆ ಇವೆರಲ್ಲರೂ ಅನರ್ಹರಾಗಿರುತ್ತಾರೆ. ಈ ಕುಟುಂಬಗಳು ಸರಕಾರದ ನಿಯಮದಂತೆ ದಂಡ ತೆರಬೇಕಾಗುತ್ತದೆ.
ದಂಡ ಕಟ್ಟುವುದು ಹೇಗೆ?
ಕುಟುಂಬಗಳು ಮೇಲೆ ತಿಳಿಸಿದಂತೆ ಇವೆರಲ್ಲರೂ ಅನರ್ಹರಾಗಿದ್ದು, ಬಂಟ್ವಾಳ ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ತೆರಳಿ ಮಾಹಿತಿ ನೀಡಬೇಕಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಯಾವಾಗ ಕುಟುಂಬ ಪಡೆದಿದೆ ಮತ್ತು ಸರಕಾರದ ಸವಲತ್ತುಗಳನ್ನು ಉಪಯೋಗಿಸಿದನ್ವಯ ದಂಡ ವಿಧಿಸಲಾಗುತ್ತದೆ. ಇಲಾಖೆ ವಿಧಿಸಿದ ದಂಡವನ್ನು ಕೆ.೨ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಈವರಗೆ ದಂಡ ವಸೂಲಿ ಮಾಡಿದಲ್ಲಿ 20 ಸಾವಿರ ರೂ. ಅತೀ ಹೆಚ್ಚು ದಂಡ ಕುಟುಂಬವೊಂದಕ್ಕೆ ವಿಧಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮನೆಗೆ ನೋಟೀಸ್?
ಕುಟುಂಬವು ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸ್ವಯಂಪ್ರೇರಿತರಾಗಿ ಪಡಿತರ ಚೀಟಿಯನ್ನು ರದ್ದತಿಗೊಳಿಸುವಂತೆ ತಪ್ಪಿದಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಸರಕಾರದ ಎಚ್ಚರಿಕೆಯ ಬಳಿಕವೂ ಅನರ್ಹಪಡಿತರ ಚೀಟಿದಾರರು ರದ್ದು ಪಡಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಿಂದ ನೇರವಾಗಿ ಮನೆಗೆ ನೊಟೀಸ್ ಜಾರಿಯಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಆರ್ಟಿಒ ಮೆಸ್ಕಾಂ ಸೇರಿದಂತೆ ಎಲ್ಲ ಸರಕಾರಿ ಇಲಾಖೆಯಿಂದಲೂ ಮಾಹಿತಿ ಪಡೆದುಕೊಂಡಿದ್ದು, ಶೀಘ್ರವೇ ನೊಟೀಸ್ ಜಾರಿಯಾಗುವ ಸಾಧ್ಯತೆ ಇದೆ.
ಬಂಟ್ವಾಳ ತಾಲೂಕಿನಲ್ಲಿ ಅ. 30ರವರೆಗೆ 450ಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿದಾರರು ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ಸ್ವತಃ ಬಂದು ಕಾರ್ಡ್ ರದ್ದು ಪಡಿಸಿ, ದಂಡ ಪಾವತಿಸಿದ್ದಾರೆ. ಇಂದಿಗೆ 2.70 ಲಕ್ಷ ರೂ. ದಂಡ ಸಂಗ್ರಹವಾಗಿದೆ. -ರಶ್ಮಿ ಎಸ್.ಆರ್, ಬಂಟ್ವಾಳ ತಹಶೀಲ್ದಾರ್