ಮಂಗಳೂರು, ನ 1(Daijiworld News/MB) : ಪಾಲಿಕೆ ಚುನಾವಣೆಯ ಟಿಕೆಟ್ ಹಂಚಿಕೆ ಸಂದರ್ಭ ಖಾಸಗಿ ಹೊಟೇಲ್ ಬಳಿ, ನನ್ನ ಮೇಲೆ ನಡೆದ ಹಲ್ಲೆಯಿಂದ ನೋವುಂಟಾಗಿದ್ದು, ಈ ಘಟನೆಯ ಬಗ್ಗೆ ವಿಷಾದವಿದೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.
ನಗರದಲ್ಲಿ ನ.1 ರ ಶುಕ್ರವಾರ ನಡೆದ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, " ಘಟನೆ ಸಂದರ್ಭ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ಅಜೀಂ ಹಾಗೂ ಡ್ರೈವರ್ ಜೊತೆಗಿದ್ದು ಟಿಕೆಟ್ ವಿಚಾರದಲ್ಲಿ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ಅಜೀಂ ಹಲ್ಲೆ ನಡೆಸಿದ್ದಾರೆ. ನನ್ನ ಮೇಲಿನ ಹಲ್ಲೆ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ನನ್ನ ಬಳಿಯಿಂದ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ಎಂದು ವಿವರಿಸಿದರು.
ಇನ್ನು ಪಾಲಿಕೆಯಲ್ಲಿ ಟಿಕೆಟ್ ನೀಡಲು ಹತ್ತು ಲಕ್ಷ ಹಣ ಪಡೆದಿರುವ ಆರೋಪಕ್ಕೆ ಉತ್ತರಿಸಿದ ಅವರು, ಹಣ ಪಡೆದಿದ್ದೆ ಎಂಬ ವಿಚಾರ ಸುಳ್ಳು. ನಾನು ಯಾರ ಬಳಿಯಿಂದಲೂ ಹಣ ಪಡೆದಿಲ್ಲ. ಆರೋಪ ಮಾಡಿರುವ ಆ ಮಹಿಳೆಗೆ ನಾವು ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಟಿಕೆಟ್ ನೀಡಿದ್ದೇವೆ. ಕಳೆದ ಚುನಾವಣೆಯಲ್ಲಿ ಆ ಮಹಿಳೆಯನ್ನು ಜನರು ತಿರಸ್ಕರಿಸಿದ್ದರು. ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಹುಮ್ಮಸ್ಸು ಎಲ್ಲರಿಗೂ ಇರುವುದು ಸಹಜ" ಎಂದು ಅವರು ಹೇಳಿದರು.
ಬುಧವಾರ ಕೊಡಿಯಾಲ್ ಬೈಲಿನ ಹೊಟೇಲಿನ ಸಭಾಂಗಣದಲ್ಲಿ ಚುನಾವಣೆಗೆ ಸಂಬಂಧಿಸಿ ಸುದ್ದಿಗೋಷ್ಠಿ ಮುಗಿಸಿ ಹೊರ ಬರುತ್ತಿದ್ದಂತೆ ಗುಲ್ಜಾರು ಸಂಬಂಧಿಕರು ಹಾಗೂ ಬೆಂಬಲಿಗರು ಕಾಟಿಪಳ್ಳ ಉತ್ತರ ವಾರ್ಡಿನಲ್ಲಿ ಫಾತಿಮಾ ಬಿ ಎಂಬವರಿಗೆ ಟಿಕೆಟ್ ನೀಡಿದರ ಕುರಿತು ಅಸಮಾಧಾನ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದರು. ಈ ವೇಳೆ ಅಜೀಂ ಬಾವಾರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಬಾವಾರ ಆಪ್ತ ಸಹಾಯಕ ಹ್ಯಾರಿಸ್ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಘಟನೆಗೆ ಸಂಬಂಧಿಸಿ ಕದ್ರಿ ಇನ್ ಸ್ಪೆಕ್ಟರ್ ಶಾಂತಾರಾಮ ಹೋಟೆಲ್ ಆವರಣಕ್ಕೆ ತೆರಳಿ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ಗುರುವಾರ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.