ಬೈಂದೂರು, ನ. 01 (DaijiworldNews/SM): ಪೊಲೀಸರಿಗೆ ಅಪರಾಧ ನಿಯಂತ್ರಣದ ಹೊಣೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಮಾಜಮುಖಿಯಾಗಿ ಮಾಡುವತ್ತ ಸರ್ಕಾರ ಗಮನ ಹರಿಸಲಿದೆ ಎಂದು ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
1 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬೈಂದೂರು ಪೊಲೀಸ್ ವೃತ್ತ ಕಚೇರಿಯ ನೂತನ ಕಟ್ಟಡವನ್ನು ಬಸವರಾಜ ಬೊಮ್ಮಾಯಿ ಶುಕ್ರವಾರ ಉದ್ಘಾಟಿಸಿದ ಬಳಿಕ ಮಾತನಾಡಿದರು.
ಸಮಾಜದಲ್ಲಿ ಕೆಲವೇ ಜನರು ಅಪರಾಧ ಪ್ರವೃತ್ತಿಯ ಜನರು ಇರುತ್ತಾರೆ. ಪೊಲೀಸರು ನಾಗರಿಕರ ಜತೆ ನಿಕಟ ಸಂಪರ್ಕ, ಸಂಬಂಧ ಸಾಧಿಸಿದರೆ ಅಪರಾಧ ನಿಯಂತ್ರಣ ಮತ್ತು ಪತ್ತೆ ಸುಲಭವಾಗುತ್ತದೆ. ಇದರ ಇನ್ನೊಂದು ಮುಖವಾಗಿ ಸರ್ಕಾರವು ಪೊಲೀಸ್ ಸಿಬ್ಬಂದಿಯ ಸೇವಾ ಸ್ಥಿತಿ, ಕರ್ತವ್ಯದ ಸ್ಥಳ, ಅಗತ್ಯ ಸೌಲಭ್ಯಗಳ ಸುಧಾರಣೆಯನ್ನೂ ಮಾಡಲಿದೆ ಎಂದು ಅವರು ಹೇಳಿದರು.
ಯಾಂತ್ರಿಕ ಉಪಕರಣಗಳ ಬಳಕೆಯ ಹೆಚ್ಚಳದ ಪರಿಣಾಮವಾಗಿ ಅವುಗಳನ್ನು ದುರುಪಯೋಗಿಸಿಕೊಂಡು ಮಾಡುವ ಅಪರಾಧ ಹೆಚ್ಚಿದೆ. ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗುತ್ತಿದೆ. ಬ್ಯಾಂಕ್ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅವರ ನಡುವೆ ಸಮನ್ವಯ ಸಾಧಿಸಲಾಗುವುದು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಸೈಬರ್ ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಲಾಗುತ್ತಿದೆ, ಕರಾವಳಿಯ ಮೂಲಕ ನಡೆಯುವ ಅಪರಾಧ ನಿಯಂತ್ರಿಸಲು ಕರಾವಳಿ ಕಾವಲು ಪಡೆಯನ್ನು ಗಟ್ಟಿಗೊಳಿಸಲಾಗುವುದು. ಅದಕ್ಕೆ ಅಗತ್ಯವಿರುವ ಸ್ಪೀಡ್ ಬೋಟ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಮುಂದಿನ ರಾಜ್ಯ ಬಜೆಟ್ನಲ್ಲಿ ಇವೆಲ್ಲವುಗಳಿಗೆ ಹಣ ಮೀಸಲಿಡುವುದರ ಜತೆಗೆ ಕೇಂದ್ರದಿಂದಲೂ ಅನುದಾನ ಪಡೆಯಲು ಯತ್ನಿಸಲಾಗುವುದು ಎಂದು ಹೇಳಿದರು.