ಚಿಕ್ಕಮಗಳೂರು, ಜ 8 : ಮೂಡಿಗೆರೆಯ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿರುವುದು ಸಂಘಟನೆಗಳ ಬೆದರಿಕೆಯಿಂದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ನೈತಿಕ ಪೊಲೀಸ್ ಗಿರಿಗೆ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಧನ್ಯಶ್ರೀಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ. ಇದರಿಂದ ಮನನೊಂದು ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಪಷ್ಟಪಡಿಸಿದರು.
ಹಿಂದೂಪರ ಕಾರ್ಯಕರ್ತರು ಧನ್ಯಶ್ರೀಗೆ ಮುಸ್ಲಿಂ ಯುವಕನೊಂದಿಗೆ ಸುತ್ತಾಡುತ್ತಿರುವುದರಿಂದ ಧಮ್ಕಿ ಹಾಕಿದ್ದಾರೆ. ಧನ್ಯಶ್ರೀ ಮನೆಗೆ ಹೋಗಿ ನಿಮ್ಮ ಮಗಳಿಗೆ ಬುದ್ಧಿವಾದ ಹೇಳಿ ಎಂದು ಆಕೆಯ ತಾಯಿಗೂ ಬೆದರಿಕೆ ಹಾಕಿದ್ದಾರೆ. ಇದೆಲ್ಲ ಆದ ಬಳಿಕ ಸಮಾಜದಲ್ಲಿ ಬದುಕುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಧನ್ಯಶ್ರೀ ಈ ಕುರಿತು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ ಎಂದು ಹೇಳಿದರು.
ಈ ಪ್ರಕರಣ ಸಂಬಂಧ ಅನಿಲ್ ಎಂಬಾತನನ್ನು ಬಂಧಿಸಲಾಗಿದೆ. ಐವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.