ಮಂಗಳೂರು, ನ 02(Daijiworld News/MSP): ಕದ್ರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪ್ರಶಾಂತ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ|ಪಿ.ಎಸ್ ಹರ್ಷ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಶಾಂತ್ ಶೆಟ್ಟಿ ವಿರುದ್ದ ,ನಗರದ ಕಂಕನಾಡಿ ಬಳಿಯ ಯೂನಿಸೆಕ್ಸ್ ಪಾರ್ಲರ್ ಮಾಲಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮಾಮೂಲಿಗಾಗಿ ಕೈಚಾಚುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. "ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತೀರಿ" ಎಂದು ಬೆದರಿಸಿ ಪ್ರತಿ ತಿಂಗಳು ಗೂಗಲ್ ಪೇ ಆಪ್ ಮೂಲಕ ಮಾಮೂಲಿ ಪಡೆಯುತ್ತಿದ್ದರು ಎಂದು ಆರೋಪಿಸಿ , ಮಾಮೂಲಿ ಪಡೆಯುತ್ತಿರುವ ಸಿಸಿ ಕ್ಯಾಮರಾ ದಾಖಲೆ ಮತ್ತು ಆಡಿಯೋ ದಾಖಲೆ ಸಹಿತ ದೂರು ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ಅವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ
ಈ ಮಾಮೂಲಿ ದಂಧೆಯಲ್ಲಿ ಕದ್ರಿ ಠಾಣೆಯ ಇತರೆ ಪೊಲೀಸರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ, ಆರೋಪಿ ಪ್ರಶಾಂತ್ ಶೆಟ್ಟಿ ಅವರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತ ಹರ್ಷ ಪ್ರಕಾಶ್ ಶೆಟ್ಟಿ "ಅಕ್ರಮ ಚಟುವಟಿಕೆ ಬಗ್ಗೆ ದೂರು ಬಂದಿದ್ದು ಅದಕ್ಕಾಗಿ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇಲಾಖೆ ವತಿಯಿಂದ ಈ ಕುರಿತು ಸಮಗ್ರ ವಿಚಾರಣೆ ನಡೆಸಲಾಗುವುದು. ಯಾರೇ ಆಗಲಿ, ಕಾನೂನು ಮೀರಿ ವರ್ತಿಸಿದರೆ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.