ಮಂಗಳೂರು, ನ 02(Daijiworld News/MSP): ಖಾಸಗಿ ಒಡೆತನದಲ್ಲಿ ಇಲ್ಲಿಯವರೆಗೆ ಪ್ರದರ್ಶನವಾಗುತ್ತಿದ್ದ ಕಟೀಲು ಯಕ್ಷಗಾನ ಮೇಳ ಸರ್ಕಾರದ ವಶವಾಗಿದೆ. ಈ ಬಗ್ಗೆ ಅ. 30 ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಏಲಂ ಮೂಲಕ ಯಕ್ಷಗಾನ ನಡೆಸಲು ಮೇಳ ನಡೆಸಲು ಸೂಚನೆ ನೀಡಿದ್ದಾರೆ.
ಹೀಗಾಗಿ ಇನ್ಮುಂದೆ ಕಟೀಲು ಯಕ್ಷಗಾನ ಮೇಳ ಸರ್ಕಾರದ ಸುಪರ್ದಿಯಲ್ಲಿ ನಡೆಯುವುದು ಸ್ಪಷ್ಟವಾಗಿದೆ. ಖಾಸಗಿ ವ್ಯಕ್ತಿಗಳ ಕೈಯಲ್ಲಿದ್ದ ಕಟೀಲು ಮೇಳ ಇನ್ಮುಂದೆ ದ.ಕ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿ ಪಾರದರ್ಶಕವಾಗಿ ನಡೆಸಲು ಆದೇಶದಲ್ಲಿ ತಿಳಿಸಲಾಗಿದೆ.
ಕಟೀಲು ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಯಕ್ಷಗಾನ ಮೇಳಗಳನ್ನ ವಂಶಪಾರಂಪರ್ಯವಾಗಿ ಬಂದ ಖಾಸಗಿ ಯಜಮಾನಿಕೆಯಲ್ಲಿ ನಡೆಸಲಾಗುತ್ತಿತ್ತು. ಯಕ್ಷಗಾನ ಮೇಳಗಳ ತಿರುಗಾಟದಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ. ಆದ್ರೆ ಇದೀಗ ಕಟೀಲು ಯಕ್ಷಗಾನ ಮೇಳಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ
ಆರು ಯಕ್ಷಗಾನ ತಂಡಗಳಿರುವ ಕಟೀಲು ಮೇಳಗಳು 2043ನೇ ಇಸವಿಯವರೆಗೆ ಆಟಗಳು ಮುಖಂಡವಾಗಿ ಕಾಯ್ದಿರಿಸಿದೆ. ದೇವಸ್ಥಾನ ಸರ್ಕಾರದ ಸುಪರ್ದಿಯಲ್ಲಿದ್ದರೂ, ಯಕ್ಷಗಾನ ಮೇಳಗಳನ್ನ ಮಾತ್ರ ಮೇಳದ ಖಾಸಗಿ ಯಾಜಮಾನಿಕೆಯಲ್ಲಿ ನಡೆಯುತ್ತಿತ್ತು. ಆದರೆ ಇದರ ವಿರುದ್ದ ಅಸಮಾಧಾನಗೊಂಡ ಹಲವರು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ ಪರಿಣಾಮ ಸದ್ಯ ಕಟೀಲಿನ ಯಕ್ಷಗಾನ ಸರ್ಕಾರದ ವಶವಾಗಿದೆ.