ಕಾಸರಗೋಡು, ನ 02 (Daijiworld News/MSP): ಬೈಕ್ ನ ಮೇಲೆ ಸಿಮೆಂಟ್ ಲಾರಿ ಮಗುಚಿ ಉಂಟಾದ ಅಪಘಾತದಲ್ಲಿ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ನ.2 ರ ಗುರುವಾರ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೂರು ತಿರುವಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಳ್ಳಮೂಲೆಯ ಈಶ್ವರ ಭಟ್ (56) ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಕಾಸರಗೋಡಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಲಾರಿ ಕೋಟೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ನ ಮೇಲೆ ಮಗುಚಿದ್ದು , ಅದರಡಿ ಸಿಲುಕಿದ್ದ ಈಶ್ವರ ಭಟ್ ಅವರನ್ನು ಪರಿಸರವಾಸಿಗಳು ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಇವರು ಯಕ್ಷ ತೂಣೀರ ಸಂಪ್ರತಿಷ್ಠಾನದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೆಡಿಕಲ್ ರೆಪ್ರಸೆಂಟಿವ್ ಆಗಿಯೂ ಕೆಲಸ ಮಾಡುತ್ತಿದ್ದರು. ಈಶ್ವರ ಭಟ್ ಅವರ ತಾಯಿ ದೇವಕಿ ೨೦ ದಿನಗಳ ಹಿಂದೆಯಷ್ಟೇ ನಿಧನರಾಗಿದ್ದರು.