ಕುಂದಾಪುರ, ಜ 09 : ಬೈಂದೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಬಂದ ಸಾರ್ವಜನಿಕರ ಊಟಕ್ಕೆ ಕೊಲ್ಲೂರು ಮೂಕಾಂಭಿಕಾ ದೇವಳದಿಂದ ಊಟದ ವ್ಯವಸ್ಥೆ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿದ್ದರಾಮಯ್ಯ ಸರ್ಕಾರ ವಿರುದ್ಧ ಹರಿಹಾಯ್ದಿದ್ದು, ಸಾಧನಾ ಸಮಾವೇಶಕ್ಕೆ ಬಂದವರಿಗೆ ಮೂಕಾಂಬಿಕಾ ದೇವಳದ ಭಕ್ತರ ಹಣದಲ್ಲಿ ಅನ್ನ ನೀಡಬೇಕೆ? ಸರ್ಕಾರಕ್ಕೆ ಅನ್ನ ನೀಡಲೂ ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಕೊಲ್ಲೂರು ಮೂಕಾಂಬಿಕಾ ದೇವಳ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ದೇವಳವು ಮುಜರಾಯಿ ಇಲಾಖೆಗೊಳಪಟ್ಟಿದ್ದರಿಂದ ಮತ್ತು ಸಾಧನಾ ಸಮಾವೇಶವೆನ್ನುವುದು ಸರ್ಕಾರಿ ಕಾರ್ಯಕ್ರಮವಾಗಿದ್ದ ಹಿನ್ನೆಲೆ ದೇವಳದಿಂದ ಊಟ ವ್ಯವಸ್ಥೆ ಮಾಡಲಾಗಿದೆ. ಮತ್ತು ದೇವಳಕ್ಕೆ ಹೊರೆಯಾಗಬಾರದೆನ್ನುವ ಕಾರಣಕ್ಕೆ ದೇವಳದ ಆಡಳಿತ ಧರ್ಮದರ್ಶಿಗಳು 1 ಲಕ್ಷ ರೂಪಾಯಿಯ ದೇಣಿಗೆ ಸಹ ನೀಡಿದ್ದಾರೆ ಎಂದು ದೇವಳ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.