ಕುಂದಾಪುರ, ನ 04 (Daijiworld News/MSP): ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆಯ ನಿರ್ಲಕ್ಷ್ಯದಿಂದ ನೆನಗುದಿಗೆ ಬಿದ್ದಿರುವ ಕುಂದಾಪುರ ಶಾಸ್ತ್ರೀ ವೃತ್ತದ ಮೇಲ್ಸೆತುವೆ ಕಾಮಗಾರಿ, ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ, ಪಡುಬಿದ್ರೆಯಲ್ಲಿನ ಚತುಷ್ಪಥ ಕಾಮಗಾರಿಯನ್ನು ಜನವರಿ ಅಂತ್ಯದೊಳಗೆ ಮುಗಿಸದಿದ್ದರೆ ಏಪ್ರಿಲ್ ಒಂದಕ್ಕೆ ಸಾಸ್ತಾನ ಟೋಲ್, ಫೆಬ್ರವರಿ ಒಂದಕ್ಕೆ ಪಡುಬಿದ್ರಿ ಟೋಲ್ ಬಂದ್ ಮಾಡಲಾಗುವುದು. ಕಾಮಗಾರಿ ಮರು ಟೆಂಡರ್ ಆದರೆ ಒಂದು ತಿಂಗಳ ರಿಯಾಯತಿ ನೀಡಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಹೆದ್ದಾರಿ ಸಮಸ್ಯೆಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ನವಯುಗ ಸಂಸ್ಥೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕಾಗಿತ್ತು. ಹಣಕಾಸಿನ ಸಮಸ್ಯೆ ಎದುರಿಸಿದ ಸಂದರ್ಭ ಸಂಸ್ಥೆಗೆ ಕೇಂದ್ರ ಸರ್ಕಾರ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿನ ಸಾಲಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೂ ಕೂಡಾ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಈ ಸಂಸ್ಥೆಗೆ ದೇಶದಲ್ಲಿ ಮತ್ತೆ ಯಾವುದೇ ಟೆಂಡರ್ ಸಿಗಬಾರದು, ಕಪ್ಪು ಪಟ್ಟಿಗೆ ಸಂಸ್ಥೆಯನ್ನು ಸೇರಿಸಬೇಕು ಹಾಗೂ ಟೆಂಡರ್ ಪಡೆದ ಕಾಮಗಾರಿಗಳನ್ನು ತಕ್ಷಣ ಪೂರ್ತಿಗೊಳಿಸಬೇಕೇಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಚತುಷ್ಪಥ ಕಾಮಗಾರಿ 2010ಕ್ಕೆ ಟೆಂಡರ್ ಆಗಿ, 2013ಕ್ಕೆ ಮುಗಿಯಬೇಕಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಎನ್.ಎಚ್.ಐ ಅಧಿಕಾರಿಗಳ ಸಮಕ್ಷಮ ಸಭೆ ನಡೆಸಬೇಕಾಗಿದೆ. ಇಲ್ಲಿನ ಕಾಮಗಾರಿಯ ವೈಫಲ್ಯದ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಬೇಕು. ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳಬೇಕಾಗಿದೆ ಎಂದರು. ಇನ್ನೂ ಕೆಲಸವನ್ನು ಮುಗಿಸುವ ಬಗ್ಗೆ ನಾವೆಲ್ಲಾ ಯೋಚನೆ ಮಾಡಬೇಕಾಗಿದೆ. ಅದಷ್ಟೂ ಶೀಘ್ರವಾಗಿ ಈ ಕಾಮಗಾರಿ ಮುಗಿಸಬೇಕಾಗಿದೆ. ಸರ್ವೀಸ್ ರಸ್ತೆಯದ್ದೂ ಸಮಸ್ಯೆ ಇದೆ. ಅಧಿಕಾರಿಗಳು, ಪ್ರಾಧಿಕಾರ, ಗುತ್ತಿಗೆ ಸಂಸ್ಥೆ ಚುರುಕಾಗಿ ಕೆಲಸ ಮಾಡಬೇಕಾಗಿದೆ. ಮರು ಟೆಂಡರ್ ಮಾಡಲು ಅವಕಾಶಗಳಿದ್ದರೆ ಹಾಗೆ ಮಾಡಿ ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದರಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಅವರ ಫ್ಲ್ಯಾನೇ ಸರಿಯಾಗಿಲ್ಲ. ಜನರಿಂದ ನಾವು ದಿನ ಬೈಗುಳ ಕೇಳಬೇಕಾಗುತ್ತದೆ. ಕೂಡಲೇ ಇದಕ್ಕೊಂದು ಪರಿಹಾರ ಆಗಬೇಕು, ಗುತ್ತಿಗೆ ಸಂಸ್ಥೆಯನ್ನು ಬದಲಾಯಿಸುವುದು ಒಳ್ಳೆಯದಲ್ಲ, ಬದಲಾಯಿಸಿದರೆ ಪ್ಲ್ಯಾನ್ನಲ್ಲೂ ಸ್ಪಲ್ಪ ಬದಲಾವಣೆ ಮಾಡಿಕೊಳ್ಳಬೇಕು. ಸರ್ವಿಸ್ ರಸ್ತೆಯ ವ್ಯಾಪ್ತಿಯನ್ನು ಅಗಲಗೊಳಿಸುವುದು ಇತ್ಯಾದಿಗಳನ್ನು ಸೇರಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಕೆಲವೆಡೆ ರಸ್ತೆ ನಿರ್ಮಾಣ ಮುಗಿದಿದ್ದರೂ ಏಕಮುಖವಾಗಿ ಸಂಚಾರ ನಡೆಯುತ್ತಿದೆ. ಕಾಮಗಾರಿ ಮುಕ್ತಾಯವಾದ ಕಡೆ ಸಂಚಾರಕ್ಕೆ ಮುಕ್ತಗೊಳಿಸಿ, ಅಪಘಾತಗಳನ್ನು ಕಡಿಮೆ ಮಾಡಿ. ವಿದ್ಯುತ್, ಕುಡಿಯುವ ನೀರು ಇತ್ಯಾದಿ ಪೈಪ್ಲೈನ್ ಕಡಿತವಾದರೆ ತಕ್ಷಣ ಸರಿಪಡಿಸಿ ಕೊಡಿ ಎಂದರು.
ಕೋಡಿಗೆ ಸಂಪರ್ಕ ಕಲ್ಪಿಸುವ ವಿನಾಯಕದ ಹತ್ತಿರ ಯು ಟೂರ್ನ್ ನೀಡಬೇಕು ಎಂದು ಆ ಭಾಗದ ಜನತೆಯ ಪರವಾಗಿ ಮಂಜು ಬಿಲ್ಲವ ಹೇಳಿದರು. ಗಣಪತಿ ಟಿ ಶ್ರೀಯಾನ್ ಮಾತನಾಡಿ, ಕೊಂಡಿ ರಸ್ತೆಗಳ ನಿರ್ಮಾಣವನ್ನು ಕೂಡಲೇ ಮಾಡಬೇಕು. ಮೋರಿ ಅಳವಡಿಕೆಯಲ್ಲಿಯೂ ಲೋಪವಾಗಿದೆ. ಸರ್ವಿಸ್ ರಸ್ತೆ ನಿರ್ಮಾಣದಲ್ಲಿಯೂ ಕಂಪನಿ ಆಸಕ್ತಿ ತೋರಿಸುತ್ತಿಲ್ಲ ಎಂದರು. ಕೆಂಚನೂರು ಸೋಮಶೇಖರ ಶೆಟ್ಟಿ ಕಾಮಗಾರಿಯ ಲೋಪದೋಷಗಳ ಬಗ್ಗೆ ತೆರೆದಿಟ್ಟರು. ಪುಷ್ಪರಾಜ್ ಶೆಟ್ಟಿ ರಸ್ತೆ ಕಾಮಗಾರಿ ಭಾಗಶಃ ಬಾಕಿ ಇರುವಂತೆ ಶಿರೂರುವಿನಲ್ಲಿ ಟೋಲ್ ವಸೂಲಿಗೆ ತಯಾರಿ ನಡೆಯುತ್ತಿದೆ ಎಂದರು. ಸಹಾಯಕ ಆಯುಕ್ತ ರಾಜು ಉಪಸ್ಥಿತರಿದ್ದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ|ನಾಗಭೂಷಣ ಉಡುಪ ಸ್ವಾಗತಿಸಿ, ವಂದಿಸಿದರು.